ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರ ಅಚಾನಕ್ಕಾಗಿ ​ಕಾರ್ಡ್​ಗಳನ್ನ ಯಾಕೆ ರದ್ದುಮಾಡುತ್ತಿದೆ ಎಂಬುದು ಗೊತ್ತಿಲ್ಲ - ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೇಷನ್ ಕಾರ್ಡ್​ ರದ್ದತಿಯ ಕುರಿತು ಮಾತನಾಡಿದ್ದಾರೆ.

union-minister-pralhad-joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

By ETV Bharat Karnataka Team

Published : 4 hours ago

ಹುಬ್ಬಳ್ಳಿ :ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿದೆ. ರಾಜ್ಯ ಸರ್ಕಾರ ಈ ರೀತಿ ಅಚಾನಕ್ಕಾಗಿ ರೇಷನ್ ಕಾರ್ಡ್​ಗಳನ್ನ ಯಾಕೆ ಕಡಿತ ಮಾಡುತ್ತಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅದೇಕೆ ರೇಷನ್ ಕಾರ್ಡ್ ರದ್ದುಪಡಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ, ಬಡವರಿಗೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯದ ಆಹಾರ ಪೂರೈಕೆ ಸಚಿವ ಮುನಿಯಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿದರು (ETV Bharat)

5 ಕೆಜಿ ಉಚಿತ ಅಕ್ಕಿಯನ್ನು ಕೇಂದ್ರ ಒದಗಿಸುತ್ತಿದೆ :ಭಾರತ ಸರ್ಕಾರ ದೇಶದಲ್ಲಿ ಜನತೆಗೆ ಬಹು ದೊಡ್ಡ ಮಟ್ಟದಲ್ಲಿ ಆಹಾರ ಭದ್ರತೆ ಒದಗಿಸುತ್ತಿದೆ. ಅಂತೆಯೇ ರಾಜ್ಯದ ಬಿಪಿಎಲ್ ಕಾರ್ಡ್​ದಾರರಿಗೂ ಪ್ರತಿ ವ್ಯಕ್ತಿಗೆ 5 ಕೆಜಿಯಂತೆ ಉಚಿತ ಅಕ್ಕಿ ಪೂರೈಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆಹಾರ ಭದ್ರತೆಗಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ 2 ಲಕ್ಷದ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದ ಶೇ. 50ರಷ್ಟು ನಗರ ಪ್ರದೇಶದವರಿಗೆ ಮತ್ತು ಶೇ.75ರಷ್ಟು ಗ್ರಾಮೀಣ ಪ್ರದೇಶದ ಜನಕ್ಕೆ ಉಚಿತ ಆಹಾರ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಕೊಕ್ಕೆ?ರಾಜ್ಯದಲ್ಲಿ ಸರ್ಕಾರ ಅದೇಕೆ APL, BPL ಕಾರ್ಡ್​ಗಳನ್ನು ರದ್ದುಪಡಿಸುತ್ತಿದೆಯೋ ಗೊತ್ತಿಲ್ಲ. ಆದರೆ, ಕಾಂಗ್ರೆಸ್ ಯೋಜನಾ ರಹಿತವಾದ ಗ್ಯಾರಂಟಿ ಯೋಜನೆಗಳನ್ನು ಪೂರೈಸಲಾಗದೇ ಹೀಗೆ ಒಂದೊಂದೇ ಗ್ಯಾರಂಟಿಗಳಿಗೆ ಕೊಕ್ಕೆ ಹಾಕುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಸಚಿವ ಜೋಶಿ ಹೇಳಿದರು.

10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದ್ದಷ್ಟೇ, ಇನ್ನೂ ಕೊಡುತ್ತಿಲ್ಲ. ಕೇಂದ್ರವೇ ಕೊಟ್ಟ 5 ಕೆಜಿ ಅಕ್ಕಿ ವಿತರಿಸುತ್ತಿದೆ. 5 ಕೆಜಿ ಅಕ್ಕಿ ದುಡ್ಡನ್ನೂ ಎಲ್ಲರಿಗೂ ಭರಿಸುತ್ತಿಲ್ಲ ಎಂದು ಹೇಳಿದರು.

ಬಸ್​ಗಳೇ ಸಂಚರಿಸುತ್ತಿಲ್ಲ :ಶಕ್ತಿ ಯೋಜನೆ ನೀಡಿದ ಮೇಲೆ ರಾಜ್ಯದಲ್ಲಿ ಅನೇಕ ಕಡೆ ಸರಿಯಾಗಿ ಬಸ್​ಗಳೇ ಸಂಚರಿಸುತ್ತಿಲ್ಲ. ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಕಡಿತಗೊಳಿಸಿದ್ದಾರೆ. ಚಾಲಕ, ನಿರ್ವಾಹಕರಿಗೆ ಇವರಿಂದ ಸಂಬಳ ಸಹ ಸರಿಯಾಗಿ ಕೊಡಲಾಗುತ್ತಿಲ್ಲ ಎಂದು ಜೋಶಿ ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆಗೆ 2000 ರೂ. ಸಹ ಅನೇಕ ಮಹಿಳೆಯರನ್ನು ತಲುಪಿಲ್ಲ. ಯುವ ನಿಧಿಯಂತೂ ಯಾವ ನಿರುದ್ಯೋಗಿಗಳ ಖಾತೆಗೂ ಜಮೆಯಾಗಿಲ್ಲ ಎಂದು ಆರೋಪಿಸಿದರು.

ಬೆಲೆ ಏರಿಕೆ ಬಿಸಿಯೇ ಗ್ಯಾರಂಟಿ : ಗೃಹ ಜ್ಯೋತಿ ಕೊಟ್ಟು ವಿದ್ಯುತ್ ಶುಲ್ಕ 7 ರೂ. ಗೆ ಹೆಚ್ಚಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದರು. ಹಾಲು, ಆಲ್ಕೋ ಹಾಲ್ ಬೆಲೆ ಏರಿಸಿದರು. ಮುದ್ರಾಂಕ ಶುಲ್ಕ ಹೆಚ್ಚಿಸಿದರು. ಹೀಗೆ ಎಲ್ಲಾ ಬೆಲೆ ಏರಿಕೆ ಮಾಡಿದ್ದಾರೆ. ಇತ್ತ ಗ್ಯಾರಂಟಿ ಯೋಜನೆಗಳೂ ಸಾರ್ಥಕಗೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಟೀಕಿಸಿದರು.

ಬಿಜೆಪಿ 40 ಪರ್ಸೆಂಟ್ ಸರ್ಕಾರ ಆರೋಪ ಠುಸ್ :ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಈಗ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. 40 ಪರ್ಸೆಂಟ್ ಸರ್ಕಾರ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಅವತ್ತೇ ಸುಳ್ಳೆಂದು ಹೇಳಿದೆ ಎಂದು ಸಚಿವ ಜೋಶಿ ಹರಿಹಾಯ್ದರು.

ಈಗ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂಬುದು ಲೋಕಾಯುಕ್ತ ತನಿಖೆಯಿಂದಲೂ ರುಜುವಾತಾಗಿದೆ. ಲೋಕಾಯುಕ್ತ ನ್ಯಾಯಾಲಯ ಸಹ ಇದು ಹುಸಿ ಆರೋಪ ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಇದಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :APL ಕಾರ್ಡುಗಳ ರದ್ಧತಿ ವಿಚಾರವಾಗಿ ಆಹಾರ ಇಲಾಖೆ ಸ್ಪಷ್ಟನೆ ಹೀಗಿದೆ

ABOUT THE AUTHOR

...view details