ಹುಬ್ಬಳ್ಳಿ : ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಿದವರು ಗೂಂಡಾಗಳಲ್ಲ, ಅವರ್ಯಾರು ಕಾನೂನು ಕೈಗೆ ತೆಗೆದುಕೊಳ್ಳುವವರಲ್ಲ. ಬೇಕಂತಲೇ ಧರ್ಮಾಧಾರಿತ ಮೀಸಲಾತಿಯನ್ನ ವಿತ್ಡ್ರಾ ಮಾಡಿ ಇವರಿಗೆ ಕೊಟ್ಟಿದ್ದಕ್ಕೆ ಇವರ ಮೇಲೆ ಒಂದು ರೀತಿಯ ಹಲ್ಲೆ ನಡೆಸುವಂತಹ ಪ್ರಯತ್ನವನ್ನ ಸಿದ್ದರಾಮಯ್ಯನವರು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿತ್ತು ಎಂಬ ಮಾಹಿತಿ ನನಗೆ ಬಂದಿತ್ತು. ನನಗೆ ಸ್ವಾಮಿಗಳು, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಸಿ ಸಿ ಪಾಟೀಲ್ ಫೋನ್ ಮಾಡಿದ್ರು. ಅಲ್ಲಿ ಮಿನಿಮಮ್ ಬಲ ಪ್ರಯೋಗವನ್ನ ಮಾಡಬಹುದಿತ್ತು. ಆದರೆ ಮ್ಯಾಕ್ಸಿಮಮ್ ಬಲ ಪ್ರಯೋಗ ಮಾಡಿದ್ದಾರೆ. ಹಾಗಾಗಿ ಅನೇಕರಿಗೆ ಗಾಯಗಳಾಗಿವೆ. ಅವರನ್ನು ವೈರಿಗಳ ತರಹ ನಡೆಸಿಕೊಂಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ವಿಜಯೇಂದ್ರ 150 ಕೋಟಿ ರೂ. ಆಮಿಷ ಒಡ್ಡಿದ್ದಾರೆಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಉತ್ತರ ಕೊಡಲು ಯೋಗ್ಯವಲ್ಲದ ಆರೋಪ. ಸಿದ್ದರಾಮಯ್ಯನವರು 1500 ಕೋಟಿ ಎಂದು ಹೇಳಬೇಕಿತ್ತು, ಬೈ ಮಿಸ್ಟೇಕ್ 150 ಕೋಟಿ ಎಂದಿರಬೇಕು. ಇದು ಅಟ್ಟರ್ ನಾನ್ ಸೆನ್ಸ್, ಅನ್ವರ್ ಮಣಪ್ಪಾಡಿ ಹೇಳಿಕೆಯಿಲ್ಲ. ಇದರಿಂದ ಎಷ್ಟು ಬೇಜಾವ್ದಾರಿ ಇದ್ದಾರೆ ಎಂಬುದು ಅರ್ಥವಾಗುತ್ತದೆ. ನಮ್ಮ ಅವಧಿಯಲ್ಲೂ ಕೆಲ ನೋಟಿಸ್ ಹೋಗಿರಬಹುದು. ಅದನ್ನು ಸೇರಿಸಿ ತೆಗೆಯಿರಿ ಎಂದು ಹೇಳಿದರು.