ಹುಬ್ಬಳ್ಳಿ : ನಾನು ಐದನೇ ಬಾರಿಗೆ ಆಯ್ಕೆ ಬಯಸಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನನ್ನ ಪ್ರತಿಸ್ಪರ್ಧಿ ಕಾಂಗ್ರೆಸ್. ಇವತ್ತಿನ ನಾಮಪತ್ರ ಮೆರವಣಿಗೆ ನನ್ನ ಹಿಂದಿನ ಚುನಾವಣೆಯ ಎಲ್ಲ ದಾಖಲೆ ಮುರಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು.
ನಾಮಪತ್ರ ಸಲ್ಲಿಕೆ ಹಿನ್ನೆಲೆ ನಗರದ ಪ್ರಮುಖ ದೇವಾಲಯ ಹಾಗೂ ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇಂದಿನ ನಾಮಪತ್ರ ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಸಚಿವ ಬೈರತಿ ಬಸವರಾಜ್ ಸೇರಿದಂತೆ ಸ್ಥಳೀಯ ನಾಯಕರು ಸೇರಿ ಸಿ ಟಿ ರವಿಯವರು, ವಿಜಯ್ ಸಂಕೇಶ್ವರ್, ಪ್ರಭಾಕರ ಕೋರೆ ಸಹ ಬರಲಿದ್ದಾರೆ ಎಂದರು.
ಧಾರವಾಡದ ಶಿವಾಜಿ ಸರ್ಕಲ್ನಿಂದ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದೇನೆ. ಮೆರವಣಿಗೆಯಲ್ಲಿ ಸುಮಾರು 30 ಸಾವಿರ ಜನ ಸೇರಲಿದ್ದಾರೆ. ಸ್ವಯಂ ಪ್ರೇರಿತವಾಗಿ ಜನ ಸೇರಲಿದ್ದಾರೆ. ನಾನು ನಾಮಪತ್ರ ಸಲ್ಲಿಸುವ ಮುನ್ನ ಮಠಕ್ಕೆ ಭೇಟಿ ಕೊಡೋದು ವಾಡಿಕೆ. ಅದರಂತೆ ಇವತ್ತು ಕೂಡಾ ಮಠಕ್ಕೆ ಭೇಟಿ ಕೊಡ್ತೀನಿ ಎಂದ ಅವರು, ನನಗೆ ವಿಶ್ವಾಸ ಇದೆ. ಜನ ಆಶೀರ್ವಾದ ಮಾಡ್ತಾರೆ ಎಂದು ಹೇಳಿದರು.
ಮುರುಘಾಮಠ ಸೇರಿದಂತೆ ಹಲವು ಕಡೆಗಳಲ್ಲಿ ಭೇಟಿ : ಜೋಶಿ ಅವರು ಇಂದು ನಾಮಪತ್ರ ಸಲ್ಲಿಕೆಗೂ ಮುಂಚೆ ಧಾರವಾಡದ ಮುರುಘಾಮಠ ಸೇರಿದಂತೆ ಹಲವು ಕಡೆಗಳಲ್ಲಿ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡರು.