ಬೆಂಗಳೂರು: ಶೀಘ್ರದಲ್ಲೇ ಎಂಎಸ್ಎಂಇಗಳಿಗಾಗಿ(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ) 100 ಕೋಟಿ ರೂ. ವರೆಗಿನ ಸಾಲ ಖಾತ್ರಿ ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ನಗರದಲ್ಲಿ ನಡೆದ ಎಂಎಸ್ಎಂಇ ಕ್ಲಸ್ಟರ್ ಔಟ್ ರೀಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಬಜೆಟ್ ಘೋಷಣೆಯಂತೆ 100 ಕೋಟಿ ರೂ. ಸಾಲ ಖಾತ್ರಿಯ ಯೋಜನೆ ಮುಂದಿನ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದರು.
ಸಂಪುಟ ಸಭೆ ಅನುಮೋದನೆ ಸಿಕ್ಕ ಕೂಡಲೇ ಬ್ಯಾಂಕ್ ಮೂಲಕ ಈ ಯೋಜನೆ ಜಾರಿಯಾಗಲಿದೆ. 100 ಕೋಟಿ ರೂ. ಸಾಲ ಖಾತ್ರಿಯ ಯೋಜನೆ ಮೂಲಕ ಎಂಎಸ್ಎಂಇಗಳಿಗೆ ಅವಧಿ ಸಾಲ ನೀಡಲಾಗುವುದು. ಯಂತ್ರೋಪಕರಣಗಳ ಸ್ಥಾಪನೆಗಾಗಿ ಈ ಅವಧಿ ಸಾಲ ನೀಡಲಾಗುವುದು. 100 ಕೋಟಿ ರೂ. ವರೆಗಿನ ಈ ಸಾಲಕ್ಕೆ ಯಾವುದೇ ಮೂರನೇ ವ್ಯಕ್ತಿಯ ಶ್ಯೂರಿಟಿ ಅವಶ್ಯಕತೆ ಇಲ್ಲ. ಸರ್ಕಾರವೇ ಖಾತ್ರಿ ನೀಡಲಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಎಂಎಸ್ಎಂಇ ಪಾಲು ದೊಡ್ಡದಿದೆ. ಸಣ್ಣ ಕೈಗಾರಿಕೆಗಳು ಅಗತ್ಯತೆ ಬಗ್ಗೆ ಬ್ಯಾಂಕ್ಗಳು ಈಗ ತಿಳಿದುಕೊಂಡಿವೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್(ಎಸ್ಐಡಿಬಿಐ) ಸಣ್ಣ ಕೈಗಾರಿಕೆಗಳನ್ನು ಚೆನ್ನಾಗಿ ಅರಿತು ಕೊಂಡಿದೆ. ಎಸ್ಐಡಿಬಿಐ ಎಂಎಸ್ಎಂಇಯ ಸಾಲದ ಅಗತ್ಯತೆಯ ಬಗ್ಗೆ ತಿಳಿದು ಕೊಂಡಿದೆ. ಹೀಗಾಗಿ ಎಂಎಸ್ಎಂಇ ಕ್ಲಸ್ಟರ್ನಲ್ಲಿ ಎಸ್ಐಡಿಬಿಐ ಉಪಸ್ಥಿತಿ ದೊಡ್ಡ ಪ್ರಮಾಣದ ಅನುಕೂಲವಾಗಲಿದೆ. ಮುಂದಿನ ಎರಡು ವರ್ಷದಲ್ಲಿ ಎಸ್ಐಡಿಬಿಐ ಎಲ್ಲಾ ಎಂಎಸ್ಎಂಇ ಕ್ಲಸ್ಟರ್ನಲ್ಲಿ ಭೌತಿಕವಾಗಿ ಇರಲಿದೆ ಎಂದರು.