ಬೆಳಗಾವಿ : ಸಂಗೊಳ್ಳಿ ರಾಯಣ್ಣನವರ ಜೀವನಚರಿತ್ರೆ ಕಟ್ಟಿಕೊಡಲು ನಿರ್ಮಿಸಿರುವ ಶೌರ್ಯ ಭೂಮಿ (ರಾಕ್ ಗಾರ್ಡನ್) ಈಗ ಪ್ರೇಕ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರತಿಯೊಂದು ಕಲಾಕೃತಿಯು ನೈಜವಾಗಿ ಮೂಡಿ ಬಂದಿದ್ದು, ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತಿವೆ. ಆದರೆ, ಪ್ರವೇಶ ಶುಲ್ಕ ಹೆಚ್ಚಾಗಿದ್ದರಿಂದ ಜನರಿಗೆ ಅದು ಹೊರೆಯಾಗಿದೆ ಎಂಬ ಆರೋಪವಿದೆ. ರಾಕ್ ಗಾರ್ಡನ್ ಹೇಗಿದೆ? ಪ್ರವಾಸಿಗರು ಏನಂತಾರೆ ಎಂಬ ಕುರಿತು ಇಲ್ಲಿದೆ ಈಟಿವಿ ಭಾರತದ ವಿಶೇಷ ವರದಿ.
ಕ್ರಾಂತಿವೀರ ರಾಯಣ್ಣನ ಹುಟ್ಟೂರು ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಹೊರವಲಯದ 10 ಎಕರೆ ವಿಶಾಲ ಪ್ರದೇಶದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಶೌರ್ಯ ಭೂಮಿ ತಲೆ ಎತ್ತಿದೆ. ರಾಯಣ್ಣನ ಜೀವನ ಚರಿತ್ರೆ ಸಾರುವ ಒಟ್ಟು 64 ಸನ್ನಿವೇಶಗಳು ಮತ್ತು 1,800ಕ್ಕೂ ಅಧಿಕ ಕಲಾಕೃತಿಗಳು ಇಲ್ಲಿವೆ. ಹಾವೇರಿ ಜಿಲ್ಲೆಯ ಗೋಟಗೋಡಿಯ ಶಿಲ್ಪಕಲಾ ಕುಟೀರದ ವ್ಯವಸ್ಥಾಪಕರಾದ ರಾಜಹರ್ಷ ಸೊಲಬಕ್ಕನವರ ನೇತೃತ್ವದಲ್ಲಿ ಕಲಾವಿದರ ಕೈಚಳಕದಲ್ಲಿ ಕಲಾಕೃತಿಗಳು ಅದ್ಭುತವಾಗಿ ಮೂಡಿ ಬಂದಿದ್ದು, ರಾಯಣ್ಣನ ಇತಿಹಾಸವನ್ನು ಮನೋಜ್ಞವಾಗಿ ತೆರೆದಿಟ್ಟಿವೆ.
ಕಳೆದ ವರ್ಷ ಜ. 17ರಂದು ಈ ಶೌರ್ಯ ಭೂಮಿಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದು, ಅಂದಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ದೊಡ್ಡವರಿಗೆ ಒಬ್ಬ ವ್ಯಕ್ತಿಗೆ ಪ್ರವೇಶ ಶುಲ್ಕ 100 ರೂ. ಇದ್ದರೆ, ಮಕ್ಕಳಿಗೆ 50 ರೂ. ನಿಗದಿಪಡಿಸಿದ್ದಾರೆ. ಶುಲ್ಕ ಹೆಚ್ಚಾದರೂ ಕೂಡ ಚನ್ನಮ್ಮಾಜಿ, ರಾಯಣ್ಣನ ಮೇಲಿನ ಅಭಿಮಾನಕ್ಕೆ ಮನಸೋತು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ವಿಶೇಷ. ಈಗ ಉತ್ಸವ ಹಿನ್ನೆಲೆಯಲ್ಲಿ ಶೌರ್ಯ ಭೂಮಿಯಲ್ಲಿ ಜನಜಾತ್ರೆ ಕಂಡುಬರುತ್ತಿದೆ.
ಯಾವ್ಯಾವ ಕಲಾಕೃತಿಗಳು..? ಕಿತ್ತೂರು ಸಂಸ್ಥಾನದ ರಾಜ ವೀರಪ್ಪ ದೇಸಾಯಿ ಅವರು ರಾಯಣ್ಣನ ಅಜ್ಜ ರೋಗಪ್ಪ ಅವರಿಗೆ ರಕ್ತಮಾನ್ಯ ಭೂಮಿ ನೀಡಿ ಗೌರವಿಸುವ ಸಂದರ್ಭ, ರಾಯಣ್ಣನ ತಂದೆ ಭರಮಪ್ಪ ಅವರು ಹುಲಿ ಬೇಟೆಯಾಡಿ ಕಿತ್ತೂರು ಸಂಸ್ಥಾನಕ್ಕೆ ಹೊತ್ತು ತಂದ ಘಟನೆ, ರಾಯಣ್ಣನಿಗೆ ನಾಮಕರಣ ಮಾಡುವ ದಿನ, ಗರಡಿಮನೆಯಲ್ಲಿ ಕಸರತ್ತು ಪ್ರದರ್ಶಿಸಿ, ಸಾಹಸ ಕಲೆ ಕರಗತ ಮಾಡಿಕೊಳ್ಳುತ್ತಿರುವುದು, ರಾಣಿ ಚನ್ನಮ್ಮಾಜಿ ಕೈಯಿಂದ ಖಡ್ಗ ಸ್ವೀಕರಿಸಿದ್ದು, ರಾಯಣ್ಣನ ತಂದೆ ಭರಮಪ್ಪ ಅವರನ್ನು ಬ್ರಿಟಿಷರು ಹೊಡೆದುರುಳಿಸಿದ್ದು, ಆಗಿನ ಧಾರವಾಡದ ಜಿಲ್ಲಾಧಿಕಾರಿ ಥ್ಯಾಕರೆ ಕಿತ್ತೂರು ಅರಮನೆಗೆ ಬಂದು ಪುತ್ರ ದತ್ತು ನಿರಾಕರಿಸಿದ್ದು, ಕಿತ್ತೂರು ಕೋಟೆ, ಕುಸ್ತಿ ಮೈದಾನ, ವೀರಭದ್ರ ದೇವಸ್ಥಾನ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಸಂಪಗಾವಿ ಜೈಲಿನ ಮೇಲೆ ದಾಳಿ, ಸುಂಕ ಪಾವತಿ ಮಾಡದಿರುವುದಕ್ಕೆ ರಾಯಣ್ಣನ ತಾಯಿಯ ತಲೆ ಮೇಲೆ ಕುಲಕರ್ಣಿ ಕಲ್ಲು ಹೊರಿಸಿದ್ದು ನಮ್ಮ ಮುಂದೆಯೇ ಘಟನೆ ನಡೆಯುತ್ತಿದೆಯೇ ಎನ್ನುವಷ್ಟು ನೈಜವಾಗಿದೆ.
ಆಗಿನ ಕಾಲದ ಸಂತೆ, ಗ್ರಾಮೀಣ ಸಂಸ್ಕೃತಿ, ಪ್ರಥಮ ಆಂಗ್ಲೊ-ಕಿತ್ತೂರು ಯುದ್ಧದಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಯುದ್ಧದಲ್ಲಿ ಸೋತಿದ್ದು, ರಾಣಿ ಚನ್ನಮ್ಮಾಜಿ ಬಂಧನ, ರಾಯಣ್ಣನ ಸೆರೆ ಮತ್ತು ಬಿಡುಗಡೆ, ಪಶ್ಚಿಮಘಟ್ಟದ ಗವಿಯಲ್ಲಿ ಮುಂದಿನ ಹೋರಾಟದ ಯೋಜನೆ ಹಾಕುತ್ತಿರುವುದು, ಡೋರಿಹಳ್ಳದಲ್ಲಿ ರಾಯಣ್ಣನನ್ನು ಮೋಸದಿಂದ ಬಂಧಿಸಿದ್ದು, ನಂದಗಡ ಹೊರವಲಯದ ಆಲದ ಮರಕ್ಕೆ ರಾಯಣ್ಣನೊಂದಿಗೆ ಆರು ಜನರಿಗೆ ಗಲ್ಲಿಗೇರಿಸುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಒಂದೊಂದು ದೃಶ್ಯವೂ ಒಂದೊಂದು ರಾಯಣ್ಣನ ಕಥೆ ಹೇಳುತ್ತದೆ. ಈ ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿರುವ ಜನರು ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಪ್ರತಿಯೊಂದು ಸನ್ನಿವೇಶ ಕುರಿತು ಮಾಹಿತಿ ಫಲಕ ಅಳವಡಿಸಲಾಗಿದ್ದು, ಜನರು ಓದಿ ತಿಳಿದುಕೊಳ್ಳುತ್ತಿದ್ದಾರೆ.
ಬೆಳಗಾವಿಯಿಂದ 50 ಕಿ. ಮೀ, ಧಾರವಾಡದಿಂದ 45 ಕಿ. ಮೀ, ಬೈಲಹೊಂಗಲದಿಂದ 16 ಕಿ.ಮೀ ಹಾಗೂ ಚನ್ನಮ್ಮನ ಕಿತ್ತೂರಿನಿಂದ 15 ಕಿ. ಮೀ ದೂರದಲ್ಲಿ ಸಂಗೊಳ್ಳಿ ಗ್ರಾಮವಿದೆ. ಸಂಗೊಳ್ಳಿ ಹೊರವಲಯದಲ್ಲಿ ಹಾದು ಹೋಗಿರುವ ಇಟಗಿ ಕ್ರಾಸ್-ಬೆಳವಡಿ ರಸ್ತೆ ಬಳಿಯೇ ಈ ರಾಕ್ ಗಾರ್ಡನ್ ಇದೆ. ಬೈಲಹೊಂಗಲ ಮತ್ತು ಕಿತ್ತೂರಿನಿಂದ ಸಂಗೊಳ್ಳಿಗೆ ಕೆಎಸ್ಆರ್ಟಿಸಿ ಬಸ್ ಸೌಕರ್ಯವಿದೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಇತಿಹಾಸಕಾರರಾದ ಬಸವರಾಜ ಕಮತ ಅವರು, ''ಗ್ರಾಮಸ್ಥರ ಒತ್ತಾಸೆಯಂತೆ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ನಿರ್ಮಿಸಿ ರಾಯಣ್ಣನ ಇತಿಹಾಸ ಬಿಂಬಿಸುವ ಕೆಲಸವನ್ನು ಸರ್ಕಾರ ಮಾಡಿದೆ. ನಾನು ರಾಯಣ್ಣನ ಇತಿಹಾಸವನ್ನು ಕೊಟ್ಟೆ. ಅದಕ್ಕೆ ತಕ್ಕಂತ ಕಲಾಕೃತಿಗಳು ಮತ್ತು ಸನ್ನಿವೇಶವನ್ನು ಕಲಾವಿದರು ಸೃಷ್ಟಿಸಿದರು. ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಕಟ್ಟಿಕೊಟ್ಟಿರುವುದು ಏಷ್ಯಾ ಖಂಡದಲ್ಲೆ ಇದು ಮೊದಲ ಪ್ರಯತ್ನ ಅಂತಾ ನಾವು ಹೆಮ್ಮೆಯಿಂದ ಹೇಳಬಹುದು. ರಜಾ ದಿನಗಳು, ಹಬ್ಬ ಹರಿದಿನಗಳಲ್ಲಿ ಇಲ್ಲಿಗೆ ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ'' ಎಂದು ಹೇಳಿದರು.
''ರಾಯಣ್ಣನ ಶೌರ್ಯ, ಸಾಹಸ, ಪರಾಕ್ರಮ ಸೇರಿ ಇಡೀ ಜೀವನವನ್ನು ನೈಜವಾಗಿ ತೋರಿಸುವ ಕೆಲಸ ಮಾಡಿರುವ ಸರ್ಕಾರಕ್ಕೆ ನಾನು ಚಿರಋಣಿ. ಆದರೆ, ಪ್ರವೇಶ ಶುಲ್ಕ 100 ರೂ. ಮಾಡಿದ್ದು ಸರಿಯಲ್ಲ. ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 25, 50 ರೂಪಾಯಿಗೆ ಇಳಿಸಿ'' ಎಂಬುದು ಗೋಕಾಕ್ ತಾಲೂಕಿನ ಕಲ್ಲೊಳ್ಳಿ ಗ್ರಾಮದಿಂದ ಬಂದಿದ್ದ ಗೂಳಪ್ಪ ವಿಜಯನಗರ ಅವರ ಒತ್ತಾಯ.
ಗೋಕಾಕಿನಿಂದ ಸ್ನೇಹಿತೆಯರ ಜೊತೆಗೆ ಬಂದಿದ್ದ ವಿದ್ಯಾರ್ಥಿನಿ ಚಿನ್ನಮ್ಮ ಅವರು ಮಾತನಾಡಿ, ''ನಾವು ಪುಸ್ತಕದಲ್ಲಿ ರಾಯಣ್ಣನ ಬಗ್ಗೆ ಓದಿದ್ದೆವು. ಆದರೆ, ರಾಕ್ ಗಾರ್ಡನ್ಗೆ ಬಂದ ಬಳಿಕ ಅವರ ಇಡೀ ಜೀವನಚರಿತ್ರೆಯ ದರ್ಶನ ನಮಗಾಯಿತು. ತುಂಬಾ ಖುಷಿ ಆಗುತ್ತಿದೆ'' ಎಂದು ಹೇಳಿದರು.
ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದಿದ್ದ ಬೈಲಹೊಂಗಲ ತಾಲೂಕಿನ ದಾಸರವಾಡಿ ಸರ್ಕಾರಿ ಶಾಲೆಯ ಶಿಕ್ಷಕ ಅಶೋಕ ಠಕ್ಕೇಕರ್ ಅವರು ಮಾತನಾಡಿ, ''ಮಕ್ಕಳು ಹೊಸ ವಿಷಯ ತಿಳಿಯಬೇಕು ಮತ್ತು ಕಲಿಯಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೇವೆ. ಇಲ್ಲಿ ನೋಡಿದರೆ ಪ್ರತಿ ಮಗುವಿಗೆ 50 ರೂ. ದೊಡ್ಡವರಿಗೆ 100 ರೂ. ತೆಗೆದುಕೊಳ್ಳುತ್ತಿದ್ದಾರೆ. ದಯವಿಟ್ಟು ಸರ್ಕಾರ ಮನಸ್ಸು ಮಾಡಿ, ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಉಚಿತ ಪ್ರವೇಶ ಕಲ್ಪಿಸಲಿ'' ಎಂದು ಕೇಳಿಕೊಂಡರು.