ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿಧ್ರೋಹಿಗಳಿಗೆ ಶಕ್ತಿ ಬಂದಂತಾಗಿದೆ. ಅಧಿಕಾರಕ್ಕೆ ಬಂದಾಗೆಲ್ಲ ಪಿಎಫ್ಐ, ಎಸ್ಡಿಪಿಐ ಮೇಲಿನ ಕೇಸ್ಗಳನ್ನ ಹಿಂಪಡೆದ ಹಿನ್ನೆಲೆ ಕೆಲವರಿಗೆ ಶಕ್ತಿ ಬಂದಿದೆ. ಹೀಗಾಗಿ ಹಸು ಕೆಚ್ಚಲು ಕೊಯ್ಯುವ ಮಟ್ಟಕ್ಕೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕ್ರಿಮಿನಲ್ಗಳಿಗೆ ಧೈರ್ಯ ಬಂದಿದೆ. ಏನಾದರೂ ಆದ್ರೆ ರಕ್ಷಿಸಿಸುತ್ತಾರೆ ಅನ್ನೋ ಧೈರ್ಯ ಹುಟ್ಟಿಕೊಂಡಿದೆ. ಪರಿಣಾಮ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಸರ್ಕಾರ ಗಟ್ಟಿಯಾಗಿದ್ರೆ, ಈ ರೀತಿಯ ಘಟನೆಗಳು ನಡೆಯೋದಿಲ್ಲ. ಸರ್ಕಾರದ ಸಂಪೂರ್ಣ ವೈಫಲ್ಯ ಆಗಿದೆ. ಅಮಾಯಕ ಹಸುಗಳ ಮೇಲೆ ಈ ರೀತಿ ಮಾಡುತ್ತಿದ್ದಾರೆ. ಇದರ ಬಗ್ಗೆ ಹೋರಾಟ ಮಾಡಿದ್ರೆ ಇದು ರಾಜಕೀಯ ಪ್ರೇರಿತ ಅಂತ ಸಿಎಂ ಅಸಡ್ಡೆಯಿಂದ ಮಾತನಾಡುತ್ತಾರೆ. ಹೀಗಾದ್ರೆ ಜನರ ಬದುಕು ಹೇಗೆ ಅನ್ನೋದನ್ನ ವಿಚಾರ ಮಾಡಬೇಕು. ಎಲ್ಲಾ ಕ್ರಿಮಿನಲ್ಗಳಿಗೆ ಕಾಂಗ್ರೆಸ್ ಸರ್ಕಾರ ಸ್ವರ್ಗ ಆಗಿದೆ ಎಂದು ಹೀಗಳೆದರು.
ಕುಡಿದು ಏನ್ ಬೇಕಾದರೂ ಮಾಡಬಹುದಾ?: ಕುಡಿದ ಮತ್ತಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದಾನೆ ಎಂದು ಯಾರೋ ಹೇಳುತ್ತಿದ್ದಾರೆ. ಹಾಗಾದ್ರೆ, ಕುಡಿದಾಗ ಏನು ಬೇಕಾದ್ರೂ ಮಾಡಬಹುದಾ? ಕುಡಿದ ಮತ್ತಿನಲ್ಲಿ ಅವರ ಮನೆಯವರನ್ನು ಕೊಲೆ ಮಾಡ್ತಾರಾ? ಯಾರು ಆ ರೀತಿ ಹೇಳಿದ್ದಾರಲ್ಲ, ಅವರ ಮನೆಯಲ್ಲೇ ಯಾರನ್ನಾದ್ರೂ ಕೊಲೆ ಮಾಡಿದ್ರೆ ಬಿಡ್ತಾರಾ? ಇದ್ದ ಹಸುಗಳನ್ನು ನರಳುವಂತೆ ಮಾಡಿ, ಹೊಸ ಹಸು ಕೊಡಿಸುವೆ ಅಂದ್ರೆ, ಜಮೀರ್ಗೆ ಏನಾದ್ರೂ ಬುದ್ಧಿ ಇದೆಯಾ? ಎಂದು ಪ್ರಶ್ನಿಸಿದರು.
ಇಂಡಿಯಿಂದ ಕಾಂಗ್ರೆಸ್ ಹೊರ ಬಂದಿಲ್ಲ, ಇಂಡಿನೇ ಕಾಂಗ್ರೆಸ್ ಅನ್ನು ಹೊರ ಹಾಕಿದೆ. ಉಳಿದ ಇಂಡಿಗಳು ಕೂಡಿ ಇವರ ಕೈಯಲ್ಲಿ ಗಿಂಡಿ ಕೊಟ್ಟು ಕಳ್ಸಿವೆ. ಕಾಂಗ್ರೆಸ್ ಪಕ್ಷ ಭಾರ ಆಗಿದೆ ಎಂದು ಜೋಶಿ ವ್ಯಂಗ್ಯವಾಡಿದರು.
ರಾಜ್ಯಕ್ಕೆ ಸುರ್ಜೆವಾಲಾ ಆಗಮನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಬಂದ್ರೆ ಏನು ಆಗಲ್ಲ. ಅವರು ಆರು ತಿಂಗಳಿಗೊಮ್ಮೆ ಬಂದು ಏನು ಮಾಡ್ತಾರೋ ನನಗೆ ಗೊತ್ತಿಲ್ಲ. ಅವರದ್ದು ರೋಜಿ ರೊಟ್ಟಿ ನಡೆಯುತ್ತೆ ಎಂದು ಕಿಚಾಯಿಸಿದರು.
ಲಾ ಅಂಡ್ ಆರ್ಡರ್ ಸಮಸ್ಯೆಗೆ ಒಳಬೇಗುದಿ ಕಾರಣ: ಡಿ.ಕೆ. ಶಿವಕುಮಾರ್ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಬಂದಾಗಿನಿಂದ ಒಳಗೊಳಗೆ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಈಗ ದೊಡ್ಡ ಪ್ರಮಾಣದಲ್ಲಿ ಏಳುತ್ತಿದೆ. ಲಾ & ಆರ್ಡರ್ ಸಮಸ್ಯೆ ಆಗೋಕೆ ಭ್ರಷ್ಟಾಚಾರ ಮತ್ತು ಒಳಬೇಗುದಿ ಕಾರಣ. ಈಗ ನಡೆಯೋ ಘಟನೆಗಳಿಗೆ ಯಾವುದೇ ರೀತಿಯ ನಿಯಂತ್ರಣ ಇಲ್ಲ ಎಂದರು.
ಗುತ್ತಿಗೆದಾರರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜೋಶಿ, ಪೊಲೀಸ್ ಠಾಣೆಗಳನ್ನು ಆಕ್ಷನ್ ಮಾಡ್ತಾ ಇದ್ದಾರೆ. ಈ ಸ್ಥಿತಿ ಬರಲು ಕಾರಣವೇ ಕಾಂಗ್ರೆಸ್ನ ಒಳ ಜಗಳ. ಮೇಲಿನಿಂದ ಬಂದವರು ಇದರೊಳಗೆ ತೂರಿಕೊಂಡು ಹೋಗ್ತಾರೆ ಎಂದರು.
ಕಂದಾಯ ಇಲಾಖೆ ಡಿಜಿಟಲೀಕರಣದಲ್ಲಿ ಹಸ್ತದ ಗುರುತು ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಭಸ್ಮಾಸುರನ ಹಸ್ತ ಆಗಿ ಬಿಟ್ಟಿದೆ. ಅದನ್ನ ರಾಜಕೀಯವಾಗಿ ವಿರೋಧ ಮಾಡೇ ಮಾಡ್ತೀವಿ. ಅದರಿಂದ ಏನು ಆಗಲ್ಲ. ಹಸ್ತ ಹಾಕಿದ ಕೂಡಲೇ ನೀವು ಗೆದ್ದು ಬಿಡ್ತೀರಿ ಅಂತ ತಿಳ್ಕೊಂಡ್ರೆ ಸುಳ್ಳು. ಇಡೀ ದೇಶದಲ್ಲೇ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ತಿದೆ. ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಒಳ ಜಗಳ ಶುರುವಾಗಿದೆ. ಇರೋದೇ ಮೂರು, ಇದರಲ್ಲಿನೂ ಕಾಂಗ್ರೆಸ್ ಕಿತ್ತು ಹೋಗುತ್ತೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಭಾರ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷ ಅಧಿಕಾರ ಕೊಟ್ಟಿದ್ದಾರೆ. ಜನಪರ ಆಡಳಿತ ಮಾಡಬೇಕು ಎಂದು ತಿಳಿ ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಆರೋಪಿ ಬಂಧನ - COWS UDDERS CUT CASE