ಮೈಸೂರು : ಕಾಡಾನೆ ದಾಳಿಯಿಂದ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಹೆಚ್. ಡಿ. ಕೋಟೆ ತಾಲೂಕಿನ ಸರಗೂರು ಗದ್ದೆ ಹಳ್ಳ ಗ್ರಾಮದಲ್ಲಿ ನಡೆದಿದೆ. ಅವಿನಾಶ್ (21) ಮೃತ ಯುವಕ.
ಇಂದು ಬೆಳಗ್ಗೆ ಜಮೀನಿಗೆ ಅವಿನಾಶ್ ಹೋದ ವೇಳೆ ಮೂರು ಕಾಡಾನೆಗಳು ದಾಳಿ ಮಾಡಿವೆ. ಪರಿಣಾಮವಾಗಿ ಸ್ಥಳದಲ್ಲೇ ಯುವಕ ಮೃತಪಟ್ಟಿದ್ದಾನೆ. ಜಮೀನಿನಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಗ್ರಾಮಸ್ಥರು ನೆರೆದಿದ್ದಾರೆ.
ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ : ಸ್ಥಳಕ್ಕೆ ಅರಣ್ಯ ಇಲಾಖೆ ಆಗಮಿಸಿ ಆನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ತಡೆಗೋಡೆಗೆ ಹಾಕಿದ್ದ ರೈಲ್ವೆ ಕಂಬಿಗಳನ್ನು ದಾಟಿ ಕಾಡಂಚಿನ ಜಮೀನುಗಳಿಗೆ ಕಾಡಾನೆಗಳು ಆಹಾರ ಅರಸಿ ಬರುತ್ತವೆ. ಸುತ್ತಾಮುತ್ತಾ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತುಳಿದು ಹಾಗೂ ತಿಂದು ನಾಶ ಮಾಡುತ್ತವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಅರಣ್ಯಾಧಿಕಾರಿಗಳು ದೂರವಾಣಿ ಸಂಪರ್ಕಕಕ್ಕೆ ಸಿಕ್ಕಿಲ್ಲ.
ಇದನ್ನೂ ಓದಿ: ಕಂಬಳದಲ್ಲಿ 69 ಮೆಡಲ್ ಪಡೆದ 'ದೂಜ'ನಿಗೆ ಆರೋಗ್ಯ ಸಮಸ್ಯೆ : ಕರೆಯಲ್ಲಿ ಓಟ ನಿಲ್ಲಿಸಿದ ಕಾನಡ್ಕದ ಕೋಣ
ಇದನ್ನೂ ಓದಿ: ಬಿಳಿಗಿರಿ ಬನದ ರಸ್ತೆಬದಿ ಕಾದಾಡಿದ ಕರಡಿಗಳು : ಕಿತ್ತಾಟ ಕಂಡು ಮತ್ತೊಂದು ಜಾಂಬವಂತ ಸೈಲೆಂಟ್