ಮುಂಬೈ: ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ವಾರದ ಮೊದಲ ವಹಿವಾಟಿನ ದಿನದಂದು ನಷ್ಟದೊಂದಿಗೆ ಕೊನೆಗೊಂಡಿವೆ. ಎರಡೂ ಸೂಚ್ಯಂಕಗಳು ತಲಾ ಶೇ 1ರಷ್ಟು ಇಳಿಕೆಯಾಗಿವೆ.
ಸೋಮವಾರದ ವಹಿವಾಟಿನಲ್ಲಿ 30 ಷೇರುಗಳ ಸೆನ್ಸೆಕ್ಸ್ 1,031.65 ಪಾಯಿಂಟ್ ಅಥವಾ ಶೇಕಡಾ 1.35 ರಷ್ಟು ಕುಸಿದು 76,347.26 ರಲ್ಲಿ ಕೊನೆಗೊಂಡಿದೆ. ಸೆನ್ಸೆಕ್ಸ್ ಇಂದು 77,128.35 - 76,249.72 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಎನ್ಎಸ್ಇ ನಿಫ್ಟಿ ಕೂಡ 345.55 ಪಾಯಿಂಟ್ಸ್ ಅಥವಾ ಶೇಕಡಾ 1.47 ರಷ್ಟು ಕುಸಿದು 23,085.95 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ ವಹಿವಾಟಿನಲ್ಲಿ ಗರಿಷ್ಠ 23,340.95 ಮತ್ತು ಕನಿಷ್ಠ 23,047.25ರ ಮಟ್ಟವನ್ನು ದಾಖಲಿಸಿತು.
ಈ ಷೇರುಗಳಲ್ಲಿ ಭಾರಿ ನಷ್ಟ: ನಿಫ್ಟಿಯ 50 ಷೇರುಗಳ ಪೈಕಿ ಅದಾನಿ ಎಂಟರ್ ಪ್ರೈಸಸ್, ಟ್ರೆಂಟ್, ಬಿಪಿಸಿಎಲ್, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಷೇರುಗಳು ಶೇಕಡಾ 6.21 ರಷ್ಟು ನಷ್ಟದೊಂದಿಗೆ ಕೊನೆಗೊಂಡವು.
ಏತನ್ಮಧ್ಯೆ, ಆಕ್ಸಿಸ್ ಬ್ಯಾಂಕ್, ಟಿಸಿಎಸ್, ಹಿಂದೂಸ್ತಾನ್ ಯೂನಿಲಿವರ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಶೇಕಡಾ 0.78 ರಷ್ಟು ಲಾಭದೊಂದಿಗೆ ಹಸಿರು ಬಣ್ಣದಲ್ಲಿ ಕೊನೆಗೊಂಡವು.
ವಿಶಾಲ ಮಾರುಕಟ್ಟೆಗಳನ್ನು ನೋಡುವುದಾದರೆ- ನಿಫ್ಟಿ ಸ್ಮಾಲ್ ಕ್ಯಾಪ್ 100 ಮತ್ತು ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕಗಳು ತಲಾ ಶೇ 4ರಷ್ಟು ಕುಸಿದವು. ಎನ್ಎಸ್ಇ ಪ್ಲಾಟ್ ಫಾರ್ಮ್ನ ಎಲ್ಲ ವಲಯ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ರಿಯಾಲ್ಟಿ ಸೂಚ್ಯಂಕ ಶೇಕಡಾ 6.47 ರಷ್ಟು ಮತ್ತು ನಿಫ್ಟಿ ಮೀಡಿಯಾ ಶೇಕಡಾ 4.54 ರಷ್ಟು ಕುಸಿದರೆ, ನಿಫ್ಟಿ ಪಿಎಸ್ಯು ಬ್ಯಾಂಕ್, ಮೆಟಲ್, ಕನ್ಸ್ಯೂಮರ್ ಡ್ಯೂರೇಬಲ್ಸ್ ಮತ್ತು ಹೆಲ್ತ್ ಕೇರ್ ಸೂಚ್ಯಂಕಗಳು ತಲಾ ಶೇಕಡಾ 3 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದವು.
ರೂಪಾಯಿ ಸಾರ್ವಕಾಲಿಕ ಕುಸಿತ: ಅಮೆರಿಕನ್ ಡಾಲರ್ ಮೌಲ್ಯವರ್ಧನೆ, ಸ್ಥಳೀಯ ಷೇರು ಮಾರುಕಟ್ಟೆಗಳಲ್ಲಿ ಹೆಚ್ಚಿದ ಮಾರಾಟ ಮತ್ತು ಕೇಂದ್ರ ಬ್ಯಾಂಕಿನ ಸೀಮಿತ ಹಸ್ತಕ್ಷೇಪದಿಂದಾಗಿ ಭಾರತೀಯ ರೂಪಾಯಿ ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು ಸುಮಾರು ಎರಡು ವರ್ಷಗಳಲ್ಲಿ ಅತಿದೊಡ್ಡ ಏಕ ದಿನದ ಕುಸಿತವನ್ನು ದಾಖಲಿಸಿದೆ. ರೂಪಾಯಿ 86.5825ರ ಕನಿಷ್ಠ ಮಟ್ಟಕ್ಕಿಳಿದು 86.5750 ರಲ್ಲಿ ಕೊನೆಗೊಂಡಿದೆ. ಇದು ದಿನದಲ್ಲಿ ಶೇ 0.7ರಷ್ಟು ಕುಸಿತವಾಗಿದೆ. ಈ ಹಿಂದೆ ಫೆಬ್ರವರಿ 2023 ರಲ್ಲಿ ಒಂದೇ ದಿನದಲ್ಲಿ ರೂಪಾಯಿ ಇಷ್ಟು ದೊಡ್ಡ ಮಟ್ಟದ ಕುಸಿತ ದಾಖಲಿಸಿತ್ತು.
ಇದನ್ನೂ ಓದಿ : ಎಷ್ಟೊತ್ತು ಕೆಲಸ ಮಾಡ್ತೀರಿ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಕೆಲಸ ಮಾಡ್ತೀರಿ ಅನ್ನೋದು ಮುಖ್ಯ: ಪೂನಾವಾಲಾ - WORK LIFE BALANCE