ದಾವಣಗೆರೆ: ನಗರದಲ್ಲಿ ಐದಂತಸ್ತಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಈಗಾಗಲೇ ಉದ್ಘಾಟನೆಯಾಗಿ ಜನರಿಗೆ ಸೇವೆ ನೀಡುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಒಟ್ಟು 120 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ಹೈಟೆಕ್ ಆಗಿ ನಿರ್ಮಿಸಲಾಗಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ನಿಲ್ದಾಣಕ್ಕೆ ಇದೀಗ 'ಬೆಸ್ಟ್ ಇನ್ಫ್ರಾಸ್ಟ್ರಕ್ಚರ್' ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
ಹಳೇ ಬಸ್ ನಿಲ್ದಾಣವನ್ನು ನೆಲಸಮ ಮಾಡಿ ಸ್ಮಾರ್ಟ್ ಸಿಟಿ ಯೋಜನೆಯ 90 ಕೋಟಿ ಅನುದಾನ ಮತ್ತು ಕೆಎಸ್ಆರ್ಟಿಸಿ ನಿಗಮದ 30 ಕೋಟಿ ಅನುದಾನ ಸೇರಿ ಒಟ್ಟು 120 ಕೋಟಿ ಅನುದಾನ ಬಳಸಿಕೊಂಡು ಅತ್ಯುತ್ತಮ ಮೂಲಸೌಕರ್ಯಗಳುಳ್ಳ ಐದಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಒಂದೇ ಬಾರಿಗೆ 46 ಬಸ್ ನಿಲುಗಡೆ: 9 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಸಿದ್ದಗೊಂಡಿದ್ದು, ನಿಲ್ದಾಣದಲ್ಲಿ ಎರಡು ಶಾಪಿಂಗ್ ಮಾಲ್ಗಳು, ಮೂರು ಸಿನಿಮಾ ಥಿಯೇಟರ್ಗಳು ಹಾಗೂ ಆರು ಲಿಫ್ಟ್ ಸೇರಿದಂತೆ ಎರಡು ಎಸ್ಕಲೇಟರ್ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಒಂದೇ ಬಾರಿಗೆ 46 ಬಸ್ಗಳು ನಿಲ್ಲಬಹುದಾಗಿದೆ. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಇದೆ. ಉಪಾಹಾರ, ಊಟ ಸೇವಿಸಲು ಹೋಟೆಲ್ ವ್ಯವಸ್ಥೆ ಸಹ ಮಾಡಲಾಗಿದೆ.
ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ: 500 ದ್ವಿಚಕ್ರ ಹಾಗೂ 104 ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ನಿಲ್ದಾಣದಲ್ಲಿರುವ ಮಾಲ್, ಸಿನಿಮಾ ಥಿಯೇಟರ್ ಹಾಗೂ ಉಳಿದ ಕಾಂಪ್ಲೆಕ್ಸ್ಗಳಿಂದ ಬರುವ ಆದಾಯದಲ್ಲಿ ಶೇ.50 ರಷ್ಟು ಸ್ಮಾರ್ಟ್ಸಿಟಿಗೆ, ಉಳಿದ ಶೇ.50 ರಷ್ಟು ಕೆಎಸ್ಆರ್ಟಿಸಿಗೆ ಸೇರಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಸ್ಮಾರ್ಟ್ ಸಿಟಿ ಎಂಡಿ ಹೇಳಿದ್ದೇನು?: ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್ ಮಾತನಾಡಿ, "ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ರೀಜನಲ್ ಅವಾರ್ಡ್ ಸಿಕ್ಕಿದೆ. ಬಸ್ ನಿಲ್ಧಾಣದಲ್ಲಿ ಜನರಿಗೆ ಸಿಗುತ್ತಿರುವ ಮೂಲಸೌಕರ್ಯಗಳು ಹಾಗೂ ಬಸ್ ನಿಲ್ದಾಣದ ಆಕಾರ ಚೆನ್ನಾಗಿ ಮೂಡಿ ಬಂದಿರುವುದರಿಂದ 'ಬೆಸ್ಟ್ ಇನ್ಫ್ರಾಸ್ಟ್ರಕ್ಚರ್' ರಾಷ್ಟ್ರಮಟ್ಟದ ಅವಾರ್ಡ್ ಬಂದಿದೆ. ಇದರಿಂದ ನಮಗೆ ಸಂತಸವಾಗಿದೆ" ಎಂದರು.
ಬಸ್ ನಿಲ್ದಾಣಕ್ಕೆ ಅವಾರ್ಡ್ ಬಂದಿರುವ ಬಗ್ಗೆ ಹೋರಾಟಗಾರರಾದ ಆವರೆಗೆರೆ ವಾಸು ಪ್ರತಿಕ್ರಿಯಿಸಿ, "ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿಯಡಿ 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೊಸ ಬಸ್ ನಿಲ್ದಾಣ ಜನರಿಗೆ ಸೇವೆ ನೀಡುತ್ತಿದೆ. ಇದಕ್ಕೆ ರಾಷ್ಟ್ರೀಯ 'ಬೆಸ್ಟ್ ಇನ್ಫ್ರಾಸ್ಟ್ರಕ್ಚರ್' ಅರ್ವಾಡ್ ಬಂದಿದೆ. ಪ್ರಶಸ್ತಿ ಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಹಿಂದೆ ದಾವಣಗೆರೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ದಿ. ಕಾಮ್ರೇಡ್ ಪಂಪಾಪತಿ ಅವರ ಹೋರಾಟ ಅವಿಸ್ಮರಣೀಯ. ಅವರ ಹೆಸರನ್ನು ನಿಲ್ದಾಣಕ್ಕೆ ಇಡಬೇಕು" ಎಂದು ಮನವಿ ಮಾಡಿದರು.
ಇದನ್ನೂ ಓದಿ: ಹೊಸ ರೂಪ ಪಡೆದು ಲೋಕಾರ್ಪಣೆಗೊಂಡ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ : ಇಂದಿನಿಂದ ಸೇವೆಗೆ ಸಿದ್ಧ
ಇದನ್ನೂ ಓದಿ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣಕ್ಕೆ ಹೊಸ ಕಳೆ; ಪ್ರಯಾಣಿಕರು, ವ್ಯಾಪಾರಿಗಳು ಹೇಳಿದ್ದೇನು?