ಹೆಚ್.ಡಿ. ಕುಮಾರಸ್ವಾಮಿ (ETV Bharat) ಮಂಡ್ಯ: ''ಪರಪ್ಪನ ಅಗ್ರಹಾರದಲ್ಲಿರುವ ಹಲವು ಕೈದಿಗಳಿಗೆ ಪಂಚತಾರಾ ಹೋಟೆಲ್‌ನ ವ್ಯವಸ್ಥೆ ಇದೆ ಎಂಬ ಚರ್ಚೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈಗ ದರ್ಶನ್ ವಿಚಾರದಲ್ಲಿ ಅದು ಮುನ್ನೆಲೆಗೆ ಬಂದಿದೆ'' ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು. ತನಿಖೆ ನಡೆಯಬೇಕು ಎಂದು ಗಲಾಟೆ ಆಗಿತ್ತು. ಸದ್ಯ ಸರ್ಕಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕೈದಿಗಳನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ತೀರ್ಮಾನ ಮಾಡುತ್ತಿದೆಯಂತೆ'' ಎಂದರು.
''ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ. ಈ ರಾಜ್ಯದಲ್ಲಿ ಸರ್ಕಾರ ಇದೆಯಾ?. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆಯೇ ಇಲ್ಲ. ಈಗ ಭ್ರಷ್ಟಾಚಾರದ ಬೀದಿ ಬೀದಿಯಲ್ಲಿ ಚರ್ಚೆ ಮಾಡುತ್ತಾ ಬೈದಾಡಿಕೊಂಡು ಓಡಾಡುವುದೇ ಕೆಲಸ ಆಗಿದೆ. ಮಂತ್ರಿಗಳಿಗೆ ಕೆಲಸ ಇಲ್ಲ, ಮುಖ್ಯಮಂತ್ರಿಗಳಿಗೆ ಸಮಯ ಇಲ್ಲ. ಹಗರಣಗಳನ್ನು ಬಗ್ಗೆ ಸಮಜಾಯಿಷಿ ಕೊಡುವುದಕ್ಕೆ ಸಮಯ ಸಾಕಾಗುತ್ತಿಲ್ಲ. ಆಡಳಿತ ನಡೆಸಲು ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದರು.
''ದುಡ್ಡು ಇದ್ದರೆ ಏನು ಬೇಕಾದರೂ ಕೊಂಡುಕೊಳ್ಳಬಹುದು. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಅವರ ನೋವು ಹೇಳಿಕೊಳ್ಳುತ್ತಾರೆ. ಪರಮೇಶ್ವರ್ ಅವರು ಪ್ರತಿ ದಿನ ಒಂದೊಂದು ಕಥೆ ಹೇಳ್ತಾರೆ. ಪಾರದರ್ಶಕವಾದ ಸರ್ಕಾರ ಮಾಡ್ತಾ ಇದೀನಿ. ನಮ್ಮದು ಹೈಟೆಕ್ ಸರ್ಕಾರ ಅಂತಾರೆ. ಪರಪ್ಪನ ಅಗ್ರಹಾರದಲ್ಲಿ ಕೊಡ್ತಾ ಇರುವುದೇ ಹೈಟೆಕ್. ಅವರು ಮಾಡಿರುವ ತಪ್ಪುಗಳನ್ನು ಮುಚ್ಚಿಕೊಳ್ಳಲು ಡೈವರ್ಟ್ ಮಾಡ್ತಾ ಇದ್ದಾರೆ. ಅಧಿಕಾರಿಗಳಿಂದ ನ್ಯಾಯ ದೊರಕಲ್ಲ. ನ್ಯಾಯಾಲಯದಿಂದ ನ್ಯಾಯ ದೊರಬೇಕು. ಇದಕ್ಕೆ ಸರ್ಕಾರವೇ ಹೊಣೆ ಆಗಬೇಕು'' ಎಂದು ತಿಳಿಸಿದರು.
ಇದನ್ನೂ ಓದಿ:ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಮಾಡುವ ಯೋಚನೆ ಇದೆ: ಸಿಎಂ ಸಿದ್ದರಾಮಯ್ಯ - Darshan Photo Viral