ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿನ ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟ ಮಾಡುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಅನಾಮಧೇಯ ವ್ಯಕ್ಯಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಮೊಬೈಲ್ಗೆ ಆಡಿಯೋ ಸಂದೇಶ ಬಂದಿರುವುದಾಗಿ ಮುಖ್ಯ ಅಧೀಕ್ಷಕಿ ಅನಿತಾ ಅವರು ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ಆಡಿಯೋ ಮಾಹಿತಿಯನ್ನು ಮುಖ್ಯ ಅಧೀಕ್ಷಕಿ ಗಮನಕ್ಕೆ ತಂದಿದ್ದು, ಅನಿತಾ ಅವರು ಅಲರ್ಟ್ ಆಗಿದ್ದಾರೆ. ಜೈಲು ಬಳಿ ಸೇರಿದಂತೆ, ಯಾವುದೇ ಸ್ಥಳದಲ್ಲಿ ಸಿಸಿಟಿವಿ ಕಣ್ಗಾವಲು ಇರುವ ಕಡೆ ಕಾರು ಪಾರ್ಕಿಂಗ್ ಮಾಡುವಂತೆ ಅಧೀಕ್ಷಕಿ ಕಾರು ಚಾಲಕನಿಗೆ ಸೂಚಿಸಲಾಗಿದೆ.
ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಅನಿತಾ ಅವರು ಕಲಬುರಗಿ ಜೈಲಿಗೆ ವರ್ಗಾವಣೆಯಾಗಿ ಬಂದಿದ್ದರು. ಅನಿತಾ ಅವರು ಸೆಂಟ್ರಲ್ ಜೈಲಿನಲ್ಲಿ ಚಾರ್ಜ್ ತೆಗೆದುಕೊಂಡ ದಿನವೇ ಕೈದಿಗಳ ಹೈಫೈ ಲೈಫ್ ಅನಾವರಣ ಆಗಿತ್ತು. ಕೈದಿಗಳ ಹೈಫೈ ಲೈಫ್ ಅನಾವರಣವನ್ನು ಕಾರಾಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡಿತ್ತು. ಬಳಿಕ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲು ಅನಿತಾ ಮುಂದಾಗಿದ್ದರು. ನಿನ್ನೆಯಷ್ಟೇ ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನಿತಾ ಅವರ ವಿರುದ್ಧ ಕೈದಿಗಳು ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: ಆರ್ಬಿಐಗೆ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ಹೆಸರಲ್ಲಿ ಬಾಂಬ್ ದಾಳಿ ಬೆದರಿಕೆ