ಕರ್ನಾಟಕ

karnataka

ETV Bharat / state

ರಾಜ್ಯದ ಉತ್ತಮ ಹೆಸರನ್ನ ಸರ್ವ ನಾಶ ಮಾಡಲು ಹೊರಟಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ - UNION MINISTER H D KUMARASWAMY

ಕೇಂದ್ರ ಸಚಿವ ಹೆಚ್.​ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಕುರಿತು ಕಿಡಿಕಾರಿದ್ದಾರೆ.

union-minister-h-d-kumaraswamy
ಹೆಚ್ ಡಿ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : 10 hours ago

ಹಾಸನ : ನಮ್ಮ ಪೂರ್ವಿಕರು ರಾಜ್ಯದಲ್ಲಿ ಉತ್ತಮ ವ್ಯವಸ್ಥೆಯ ಬಗ್ಗೆ ಮಾಡಿದ್ದ ಉತ್ತಮ ಹೆಸರನ್ನ ಸರ್ವನಾಶ ಮಾಡುವುದಕ್ಕೆ ರಾಜ್ಯ ಸರ್ಕಾರ ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿನಿಂದ ನಡೆಯುತ್ತಿರುವ ಪ್ರಕರಣಗಳನ್ನು ನೋಡಿದ್ದೇವೆ. ಈ ಸರ್ಕಾರದವರು ರಾಜ್ಯಕ್ಕೆ ಮುಂದಿನ ದಿನಗಳು ಬಹಳ ಕೆಟ್ಟ ರೀತಿಯಲ್ಲಿ ಬೆಳೆಯುವುದಕ್ಕೆ ವೈಷಮ್ಯದ, ದ್ವೇಷದ ಬೀಜವನ್ನು ಬಿತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಉತ್ತಮ ಹೆಸರನ್ನ ಸರ್ವ ನಾಶ ಮಾಡಲು ಹೊರಟಿದ್ದಾರೆ : ಹೆಚ್ ಡಿ ಕುಮಾರಸ್ವಾಮಿ (ETV Bharat)

''ವಿನಯ್ ಕುಲಕರ್ಣಿ ಪ್ರಕರಣ ಏನಾಯ್ತು? ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಶಿಕ್ಷಕಿ ದೂರು ನೀಡಿದ್ದರೂ ಅವರಿಗೆ ನ್ಯಾಯ ದೊರಕಿಲ್ಲ. ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೊಡುಗೆ ಏನು? ಆ ಆಸ್ಪತ್ರೆಗೆ ನಾನು ಚಾಲನೆ ಕೊಟ್ಟೆ. ನಂತರ ಬಿಜೆಪಿ ಸರ್ಕಾರ 180 ಕೋಟಿ ಹಣ ಬಿಡುಗಡೆ ಮಾಡಿತು. ಜಯದೇವ ಆಸ್ಪತ್ರೆಯಿಂದ ಡಾ. ಮಂಜುನಾಥ್ ಅವರು 40 ಕೋಟಿ ಸಂಗ್ರಹಿಸಿ ಹೂಡಿಕೆ ಮಾಡಿದ್ದರು. ಹಿಂದೆ ಕೆಲಸ ಮಾಡಿದವರನ್ನ ನೆನಪಿಸಿಕೊಳ್ಳುವ ಕೃತಜ್ಞತೆಯಿಲ್ಲದ ಅನಾಗರೀಕ ಸರ್ಕಾರ ಇದು. ಇವರ ಕೊಡುಗೆ ಏನಿದೆ? ಈಗ ನೋಡಿದರೆ ನಿಮ್ಹಾನ್ಸ್​ ಮಾಡ್ತಾರಂತೆ'' ಎಂದು ಹೆಚ್​ಡಿಕೆ ಹರಿಹಾಯ್ದರು.

''ಇರುವ ಆಸ್ಪತ್ರೆಗಳಿಗೆ ಸರಿಯಾದ ಸೌಲಭ್ಯ ನೀಡದ ಈ ಸರ್ಕಾರ ಈಗ ಮತ್ತೆ ಮೈಸೂರು ಮತ್ತು ಕಲಬುರಗಿಗೆ ನಿಮ್ಹಾನ್ಸ್ ಆಸ್ಪತ್ರೆ ನೀಡ್ತಾರಂತೆ. ಮೊದಲು ಇರುವ ಆಸ್ಪತ್ರೆಗಳಿಗೆ ಮೂಲಸೌಕರ್ಯ, ವೈದ್ಯರ ನೇಮಕಾತಿ, ಸಿಬ್ಬಂದಿ ಕೊರತೆಯನ್ನು ನೀಗಿಸಿ'' ಎಂದು ಒತ್ತಾಯಿಸಿದರು.

ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಎಂದಿರುವ ಡಿ. ಕೆ ಶಿವಕುಮಾರ್​ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದ್ರೆ ಈ ಜಿಲ್ಲೆಗೆ ಕಾಂಗ್ರೆಸ್​ ನಾಯಕರ ಕೊಡುಗೆ ಏನು? ಎಂದು ಕೇಳಿದ್ದಾರೆ. ಸಿಡಿ ಬಿಟ್ರಲ್ಲಾ ಅದೇ ತಾನೆ ಹಾಸನ ಜಿಲ್ಲೆಗೆ ಕಾಂಗ್ರೆಸ್​ನ ಕೊಡುಗೆ? ಅದು ಬಿಟ್ಟು ಇವರು ಹಾಸನ ಜಿಲ್ಲೆಗೆ ಏನು ಕೊಟ್ಟಿದ್ದಾರೆ?. ಇವರಿಗೆ ಹಾಸನದ ಫ್ಲೈ ಓವರ್​ನ್ನ ರೆಡಿ ಮಾಡಲು ಆಗಲಿಲ್ಲ ಎಂದು ಟೀಕಿಸಿದರು.

ಸಾಕ್ಷಿಗುಡ್ಡೆಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾರ್ವಜನಿಕ ಸಂಪತ್ತನ್ನ ಲೂಟಿ ಮಾಡಿ ನಾವೇನಾದ್ರು ಸಾಕ್ಷಿ ಗುಡ್ಡೆ ಮಾಡಿದ್ದರೆ ತೋರಿಸಬಹುದಿತ್ತು. ಸಾರ್ವಜನಿಕರ ಆಸ್ತಿ, ಸರ್ಕಾರದ ಆಸ್ತಿ ಹಾಗೂ ಪ್ರಕೃತಿಯನ್ನ ಲೂಟಿ ಹೊಡೆದಿರುವವರ ಬಳಿ ಸಾಕ್ಷಿ ಗುಡ್ಡೆ ಇದೆ. ನಾವೆಲ್ಲಿಂದ ತರುವುದು ಸಾಕ್ಷಿ ಗುಡ್ಡೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ದೇವಾಲಯಕ್ಕೆ ಭೇಟಿ ನೀಡಿದ ಹೆಚ್​ಡಿಕೆ : ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ತಮಿಳುನಾಡಿನ ತಿರುಚನಾಪಳ್ಳಿಯ ಸಿದ್ದರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಅವರೊಂದಿಗೆ ಸಹೋದರ, ಮಾಜಿ ಸಚಿವ ಹೆಚ್. ಡಿ ರೇವಣ್ಣ ಹಾಗೂ ಶಾಸಕ ಹೆಚ್. ಪಿ ಸ್ವರೂಪಪ್ರಕಾಶ್ ಉಪಸ್ಥಿತರಿದ್ದರು. ದೇವಾಲಯದಲ್ಲಿ ನೆಲದ ಮೇಲೆ ಕುಳಿತು ಅವರು ಪೂಜೆ ಸಲ್ಲಿಸಿದರು.

ಬಳಿಕ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿರುವ ಕುಲದೈವ ದೇವೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮಿಳುನಾಡಿನ ತಿರುಚನಪಲ್ಲಿಯಿಂದ ಹೆಚ್​ಡಿಕೆ ಅವರೊಂದಿಗೆ 'ಸಿದ್ಧ' ಮಸಿ ಸಿವ ಚಿತ್ತಂ ಎಂಬುವರ ಜೊತೆ ದೇವಾಲಯಗಳಿಗೂ ಭೇಟಿ ನೀಡಿದರು.

ಇದಕ್ಕೂ ಮುನ್ನ ಬೆಳಗ್ಗೆ ಧನುರ್ಮಾಸ ಪೂಜೆ ಆರಂಭಿಸುವ ಮೂಲಕ ಮನೆ ದೇವರಾದ ಚನ್ನರಾಯಪಟ್ಟಣ ತಾ. ಯಲಿಯೂರಿಗೆ ಭೇಟಿ ನೀಡಿ ಲಕ್ಷ್ಮಿ ದೇವಿಗೆ ಪೂಜೆ ನೆರವೇರಿಸಿದರು.

ಇದನ್ನೂ ಓದಿ :ಚನ್ನಪಟ್ಟಣ - ರಾಮನಗರ ಅಭಿವೃದ್ಧಿ, 10 ಸಾವಿರ ಜನರಿಗೆ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆ: ಹೆಚ್​.ಡಿ.ಕೆ - H D KUMARASWAMY

ABOUT THE AUTHOR

...view details