ಬೆಂಗಳೂರು :ಇತ್ತೀಚೆಗೆ ಮೈಸೂರಿನ ಉದಯಗಿರಿಯಲ್ಲಿ ಕೆಲ ದೇಶದ್ರೋಹಿಗಳು ಅಟ್ಟಹಾಸ ಮೆರೆದಿದ್ದಾರೆ. ಇವತ್ತು ಅಲ್ಲಿ ಜಾಗೃತಿ ಜಾಥಾಗೆ ಕರೆ ಕೊಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮೈಸೂರಿಗೆ ಹೋಗುವ ಮುನ್ನ ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಕಳೆದೆರಡು ವರ್ಷಗಳಿಂದ ತುಷ್ಟೀಕರಣ ರಾಜಕಾರಣ ಮಾಡ್ತಿದೆ. ಇದನ್ನು ನೋಡಿದರೆ ನಿಜಾಮರ ಆಡಳಿತ ನೆನಪಾಗುತ್ತದೆ. ರಾಜರ ಕಾಲದ ಆಡಳಿತ ಏನೋ ಅನ್ನುವ ಹಾಗೆ ಹಿಂದೂಗಳಿಗೆ ಭಾಸವಾಗುತ್ತಿದೆ ಎಂದರು.
ಪೊಲೀಸರಿಗೂ ಸ್ವಾತಂತ್ರ್ಯ ಕೊಟ್ಟಿಲ್ಲ, ಖುದ್ದು ಪೊಲೀಸ್ ಇಲಾಖೆ ಅಸಹಾಯಕವಾಗಿದೆ. ಗೃಹ ಸಚಿವರೇ ರಾಜೀನಾಮೆ ಬಗ್ಗೆ ಮಾತನಾಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾವು ಕೂಡಾ ಇವತ್ತು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಸರ್ಕಾರವನ್ನು ಎಚ್ಚರಿಸ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ನಿಷೇಧಾಜ್ಞೆ ಹೇರಿಕೆಗೆ ಖಂಡನೆ :ಸರ್ಕಾರಕ್ಕೆ ತಾಕತ್, ಯೋಗ್ಯತೆ ಇದ್ದಿದ್ರೆ ಆವತ್ತು ದೇಶದ್ರೋಹಿಗಳು ಕಲ್ಲೆಸೆದಾಗ ನಿಷೇಧಾಜ್ಞೆ ಹೇರಬೇಕಿತ್ತು. ಇವತ್ತು ಹಿಂದೂ ಕಾರ್ಯಕರ್ತರು ಹೋರಾಟ ಮಾಡುತ್ತೇವೆ ಎಂದರೆ ನಿಷೇಧಾಜ್ಞೆ ಹೇರೋದು ಅಲ್ಲ. ಯಾಕೆ ಆವತ್ತು ಸರ್ಕಾರ, ಗೃಹ ಇಲಾಖೆ ಸತ್ತು ಹೋಗಿತ್ತಾ?. ಏನೇ ಆದರೂ ನಾವು ಹೋರಾಟ ಮಾಡ್ತೇವೆ, ನಮ್ಮ ಹೋರಾಟ ತಡೆಯಲು ಏನೇ ನಿಷೇಧಾಜ್ಞೆ ಹಾಕಿದ್ರೂ ಆಗಲ್ಲ. ಇವತ್ತು ಎಲ್ಲ ಹಿಂದೂಪರ ಸಂಘಟನೆಯವರು ಭಾಗವಹಿಸ್ತಿದ್ದಾರೆ ಎಂದು ತಿಳಿಸಿದರು.