ಬೆಂಗಳೂರು:ಓಲಾ, ಉಬರ್ ಟ್ಯಾಕ್ಸಿ ಸೇವೆಗಳಿಗೆ ಶೇಕಡಾ 5ರಷ್ಟು ಮಾತ್ರ ಸೇವಾ ಶುಲ್ಕವನ್ನು ಸಂಗ್ರಹಿಸುವಂತೆ ಏಕ ಸದಸ್ಯಪೀಠ ನೀಡಿದ ಆದೇಶ ಪ್ರಶ್ನಿಸಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಉಬರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ''ಆಟೋ ಚಾಲಕ ಮತ್ತು ಅಗ್ರಿಗೇಟರ್ ನಡುವಿನ ಒಪ್ಪಂದವನ್ನು ಸಾರಿಗೆ ಇಲಾಖೆ ನಿಯಂತ್ರಿಸಲು ಅವಕಾಶವಿಲ್ಲ. ಆದರೆ, ಏಕಸದಸ್ಯ ಪೀಠ ಉಬರ್ ಅನ್ನು ಅಗ್ರಿಗೇಟರ್ ಎಂದು ಪರಿಗಣಿಸಿದೆ. ಆದರೆ, ಕಂಪನಿ ಎಂಬುದಾಗಿ ತಿಳಿಸಿದೆ. ಇದರಿಂದ ಕಂಪೆನಿ ಯಾವುದೇ ರೀತಿಯ ಸಾರಿಗೆ ಸೇವೆ ನಡೆಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಮೋಟಾರು ವಾಹನಗಳ ಕಾಯ್ದೆಯಡಿ ನಮ್ಮ ಕಕ್ಷಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಿದಂತಾಗಿದೆ. ಆದ್ದರಿಂದ ಏಕಸದಸ್ಯ ಪೀಠ ಆದೇಶವನ್ನು ಮಾರ್ಪಡಿಸಬೇಕು'' ಎಂದು ಕೋರಿದರು.
ಇದಕ್ಕೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ಅರ್ಜಿದಾರ ಸಂಸ್ಥೆಗಳು ಅತ್ಯಂತ ಪ್ರಬಲವಾಗಿದ್ದು, ಅವರು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಅವರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಲ್ಲಿ ಸ್ಪರ್ಧಾತ್ಮಕ ಕಾಯಿದೆಯ ಉಲ್ಲಂಘನೆ ಮಾಡುತ್ತಿದ್ದು, ಈ ಕುರಿತು ವಿಚಾರಣೆ ನಡೆಸಲು ಭಾರತೀಯ ಸ್ಪರ್ಧಾ ಆಯೋಗಕ್ಕೆ ಕಳುಹಿಸಬೇಕು'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.