ಮಂಗಳೂರು: ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಇಂದು 110 ಭಾಷೆಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಜಗತ್ತಿನಾದ್ಯಂತ ಹಲವು ಭಾಷೆಗಳ ಸೇರ್ಪಡೆಯ ಮಧ್ಯೆ ಕರಾವಳಿ ಕರ್ನಾಟಕದ ತುಳು ಭಾಷೆಗೂ ಮಾನ್ಯತೆ ದೊರೆತಿದೆ.
ಜಾಗತಿಕ ಅಂತರ್ಜಾಲ ದೈತ್ಯ ಸಂಸ್ಥೆಯಾಗಿರುವ ಗೂಗಲ್ ತನ್ನ ಟ್ರಾನ್ಸ್ಲೇಟ್ ಆ್ಯಪ್ ಅಪ್ಡೇಟ್ ಮಾಡಿದರೆ ಅಥವಾ ವೆಬ್ಸೈಟ್ನಲ್ಲಿ ಸರ್ಚ್ ಮಾಡಿದರೆ ತುಳು ಭಾಷೆ ಸೇರ್ಪಡೆಯಾಗಿರುವುದು ಗೊತ್ತಾಗುತ್ತದೆ. ತುಳು ಭಾಷೆಗೆ ಪ್ರತ್ಯೇಕ ಲಿಪಿ ಇದ್ದರೂ, ಈ ಲಿಪಿ ಬಗ್ಗೆ ಹೆಚ್ಚಿನ ತುಳುವರಿಗೆ ಜ್ಞಾನವಿಲ್ಲ. ಆದರೆ ಗೂಗಲ್ ಟ್ರಾನ್ಸ್ಲೇಟ್ನಲ್ಲಿ ತುಳು ಲಿಪಿಯ ಬದಲು ಕನ್ನಡ ಲಿಪಿಯಲ್ಲಿ ತುಳು ಭಾಷೆಗೆ ಭಾಷಾಂತರವಾಗುತ್ತಿದೆ. ಇದರಿಂದ ಜಗತ್ತಿನ ಯಾವುದೇ ಭಾಷೆಯಿಂದ ತುಳು ಭಾಷೆಗೆ ನೇರ ಭಾಷಾಂತರ ಮಾಡಲು ಸಾಧ್ಯವಾಗಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ, "ಗೂಗಲ್ ಟ್ರಾನ್ಸ್ಲೇಟ್ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವ. ಇದು ತುಳುವರು ಸಂಭ್ರಮಪಡುವ ವಿಚಾರವಾಗಿದೆ. ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಷೋಡಶಾವಧಾನದಲ್ಲಿ ಬಾಲಕನ ವಿಶೇಷ ಸಾಧನೆ! ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅನ್ವೇಶ್ ಅಂಬೆಕಲ್ಲು - Achievement In Shodashavadhana