ಚಾಮರಾಜನಗರ: ಪ್ರಸಿದ್ಧ ಯಾತ್ರಾ ಕ್ಷೇತ್ರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಉದ್ದೇಶದ ಸಲುವಾಗಿ 'ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ' (ಗ್ರೀನ್ ಟುಮಾರೋ- ಎಂಎಂಹಿಲ್ಸ್) ಎಂಬ ಮಹತ್ತರ ಯೋಜನೆ ಅನುಷ್ಠಾನಕ್ಕಾಗಿ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆ (ಎಂವೈಕೆಎಪಿಎಸ್-ಮೈಕಾಪ್ಸ್)ಯ ಉಪಾಧ್ಯಕ್ಷ ತ.ಮ. ವಿಜಯ ಭಾಸ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋನಾ ರೋತ್ ಸಮ್ಮುಖದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು, ಮೈಸೂರು ಕಾವೇರಿ ಪ್ರಾದೇಶಿಕ ಸಂಸ್ಥೆಯ (ಎಂವೈಕೆಎಪಿಎಸ್-ಮೈಕಾಪ್ಸ್) ಕಾರ್ಯನಿರ್ವಾಹಕ ನಿರ್ದೇಶಕ ಅಶ್ರಪ್ ಉಲ್ ಹಸನ್ ಹಾಗೂ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಕಿರಣ್ ಯೋಜನೆ ಅನುಷ್ಠಾನದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಹಸಿರು ನಾಳೆ, ಮಲೆ ಮಹದೇಶ್ವರ ಬೆಟ್ಟ (ಗ್ರೀನ್ ಟುಮಾರೊ, ಎಂಎಂ ಹಿಲ್) ಯೋಜನೆಯು ಮೂರು ವರ್ಷಗಳದಾಗಿದ್ದು, ತ್ಯಾಜ್ಯ ನಿರ್ವಹಣೆಯ ಎಲ್ಲ ವಿಭಾಗಗಳಲ್ಲಿ ಸಮರ್ಪಕವಾಗಿ ಯೋಜನೆ ಅನುಷ್ಠಾನವಾಗಲಿದೆ. ಎಲ್ಐಸಿ ಹೆಚ್ಎಫ್ಎಲ್. ಸಂಸ್ಥೆಯು ಯೋಜನೆಗೆ ಅಗತ್ಯವಾದ ಅನುದಾನದ ನೆರವು ನೀಡಲಿದ್ದು, ಮೈಕಾಪ್ಸ್ ಸಂಸ್ಥೆಯು ಯೋಜನೆ ಅನುಷ್ಠಾನ ನಿರ್ವಹಣೆ ಹೊತ್ತಿದೆ. ಯೋಜನೆಯು ಮಲೆ ಮಹದೇಶ್ವರ ಬೆಟ್ಟವನ್ನು ಹಸಿರುಮಯವಾಗಿಸುವ ಖಾತರಿಯೊಂದಿಗೆ ಅಗತ್ಯವಿರುವ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆ, ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನ ಸುಸ್ಥಿರಗೊಳಿಸುವ, ತ್ಯಾಜ್ಯ ಸಂಗ್ರಹಣೆಯಿಂದ ಬರುವ ಆದಾಯ ಸ್ಥಳೀಯವಾಗಿ ನೀಡುವುದೂ ಸೇರಿದಂತೆ ಒಟ್ಟಾರೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ಉದ್ದೇಶ ಹೊಂದಿದೆ.
ಒಡಂಬಡಿಕೆ ಬಳಿಕ ಮೈಕಾಪ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ತ.ಮ. ವಿಜಯ ಭಾಸ್ಕರ್ ಮಾತನಾಡಿ, ಕಾವೇರಿ ಪ್ರಾದೇಶಿಕ ಸಂಸ್ಥೆಯು ಕಾವೇರಿ ನದಿಯ ಜಿಲ್ಲೆಗಳಲ್ಲಿ ಬಹುಮುಖ್ಯ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾಗಿದೆ. ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಗೆ ಅನುಕೂಲವಾಗುವ ಇನ್ನೂ ಹೆಚ್ಚು ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳಲಿದ್ದೇವೆ. ಅಧಿಕ ಕೆಲಸ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲಿದ್ದೇವೆ ಎಂದರು.