ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಗಾಯಕ ಸೋನು ನಿಗಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋ ಅವರ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಇತ್ತೀಚೆಗೆ ಪುಣೆಯಲ್ಲಿ ಕನ್ಸರ್ಟ್ (ಲೈವ್ ಮ್ಯೂಸಿಕ್ ಪ್ರೋಗ್ರಾಮ್) ನಡೆಸಿದ್ದರು. ಅಲ್ಲಿ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿತು. ಗಾಯಕ ತುಂಬಾನೇ ನೋವನ್ನು ಅನುಭವಿಸಿದರು ಎಂದು ವರದಿಯಾಗಿದೆ.
ಇಂಡಿಯನ್ ಪಾಪ್ಯುಲರ್ ಸಿಂಗರ್ ಸೋನು ನಿಗಮ್ ತಮ್ಮ ಅಧಿಕೃತ ಇನ್ಸ್ಸ್ಟಾಗ್ರಾಮ್ನಲ್ಲಿ ನೋವಿನಿಂದ ನರಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಬೆನ್ನುಮೂಳೆಗೆ ಸೂಜಿಯಿಂದ ಚುಚ್ಚಿದಂತೆ ಭಾಸವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ, ಅವರು ನೋವಿನಿಂದ ನರಳುತ್ತಿರುವುದನ್ನು ಕಾಣಬಹುದು.
ನಂತರ ಬೆಡ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮಾತನಾಡಿದ ಗಾಯಕ, 'ಇದು ನನ್ನ ಜೀವನದ ಅತ್ಯಂತ ಕಠಿಣ ದಿನವಾಗಿತ್ತು. ಪ್ರದರ್ಶನದ ಸಂದರ್ಭ ತೀವ್ರ ನೋವನ್ನನುಭವಿಸಿದೆ. ಆದಾಗ್ಯೂ, ನಾನು ಅದನ್ನು ಹೇಗೋ ನಿಭಾಯಿಸಿ ನನ್ನ ಪ್ರದರ್ಶನವನ್ನು ಪೂರ್ಣಗೊಳಿಸಿದೆ. ನನ್ನ ಪ್ರದರ್ಶನ ಚೆನ್ನಾಗಿತ್ತು ಎಂದು ನನಗೆ ಸಂತೋಷವಾಗಿದೆ' ಎಂದು ತಿಳಿಸಿದರು.
ಗಾಯಕ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ಗೆ, 'ನಿನ್ನೆ ರಾತ್ರಿ ಸರಸ್ವತಿ ನನ್ನ ಕೈ ಹಿಡಿದಳು' ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಗಾಯಕನ ಅಪಾರ ಸಂಖ್ಯೆಯ ಅಭಿಮಾನಿಗಳು ಚಿಂತಿತರಾದರು. ಕಾಮೆಂಟ್ ವಿಭಾಗದಲ್ಲಿ ತಮ್ಮ ಪ್ರತಿಕ್ರಿಯೆ ನೀಡಲು ಶುರು ಮಾಡಿದರು.
ಇದನ್ನೂ ಓದಿ: ಆದಿಮಾನವನಂತೆ ಮುಂಬೈ ರಸ್ತೆಗಳಲ್ಲಿ ಓಡಾಡಿದ್ದು ನಟ ಅಮೀರ್ ಖಾನ್ ಅಲ್ಲ! ವೈರಲ್ ವಿಡಿಯೋ ನೋಡಿದ್ರಾ
ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಸೋನು ಜಿ ದೇವರು ನಿಮ್ಮನ್ನು ಆಶೀರ್ವದಿಸಲಿ, ನೀವು ನಮಗೆಲ್ಲರಿಗೂ ಸ್ಫೂರ್ತಿ' ಎಂದು ತಿಳಿಸಿದ್ದಾರೆ. 'ಸರಸ್ವತಿ ಜಿ ತಮ್ಮ ಮೆಚ್ಚಿನ ಮಗುವಿಗೆ ಏನೂ ಆಗಲು ಬಿಡುವುದಿಲ್ಲ' ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ. ಮತ್ತೋರ್ವ ಫ್ಯಾನ್ ಪ್ರತಿಕ್ರಿಯಿಸಿ, 'ನಿಮ್ಮ ಬಗ್ಗೆ ಕಾಳಜಿ ವಹಿಸಿ ಸೋನು ಜಿ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ನನ್ನಲ್ಲಿ ಕೆಟ್ಟ ಭಾವನೆಗಳಿಲ್ಲ, ಆದ್ರೆ ಜನರ ಯೋಚನೆ..!' ಕಿಸ್ ವಿವಾದದ ಬಗ್ಗೆ ಉದಿತ್ ನಾರಾಯಣ್ ಪ್ರತಿಕ್ರಿಯೆ
ತಮ್ಮ ಅಭಿಮಾನಿಯ ಇನ್‌ಸ್ಟಾಗ್ರಾಮ್ ಸ್ಟೋರಿಯನ್ನು ಗಾಯಕ ರೀಶೇರ್ ಮಾಡಿದ್ದು, ಅದರಲ್ಲಿ 'ಸೋನು ನಿಗಮ್ ನಿನ್ನೆ ರಾತ್ರಿ ಪುಣೆಯಲ್ಲಿ ಒಂದು ಕಾರ್ಯಕ್ರಮವನ್ನು ಹೊಂದಿದ್ದರು' ಎಂದು ಬರೆಯಲಾಗಿದೆ. 'ಕಾರ್ಯಕ್ರಮದ ಸಂದರ್ಭ ಅವರಿಗೆ ತೀವ್ರ ಬೆನ್ನು ನೋವಿತ್ತು. ಇದನ್ನೆಲ್ಲಾ ಬದಿಗಿಟ್ಟು, ಅವರು ವೇದಿಕೆಗೆ ಬಂದ ತಕ್ಷಣ, ತಮ್ಮ ಅಭಿಮಾನಿಗಳಿಗೆ ಯಾವ ಸುಳಿವನ್ನೂ ಬಿಟ್ಟುಕೊಡಲಿಲ್ಲ. ಎರಡು ಪಟ್ಟು ಹೆಚ್ಚು ಶಕ್ತಿ ಹಾಕಿ ಪ್ರದರ್ಶನ ನೀಡಿದರು. ಇದು ನಿಜಕ್ಕೂ ಅದ್ಭುತವಾಗಿತ್ತು. ಈ ಶಕ್ತಿ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯಲಿ ಎಂದು ಆಶಿಸುತ್ತೇನೆ' ಎಂದು ಬರೆಯಲಾಗಿದೆ.