ಹಣ ಕೊಟ್ಟು ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿರುವ ಜನರು (ETV Bharat) ಚಿಕ್ಕಮಗಳೂರು:ಮಲೆನಾಡಿನಲ್ಲಿ ಪುಷ್ಯ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಹಲವು ಗ್ರಾಮಗಳಲ್ಲಿ ವಿದ್ಯುಚ್ಛಕ್ತಿ ಪೂರೈಕೆ ಸ್ಥಗಿತಗೊಂಡಿದೆ. ಜನರು ಹಣ ಕೊಟ್ಟು ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳುವಂತಾಗಿದೆ. ಫುಲ್ ಮೊಬೈಲ್ ಚಾರ್ಜ್‌ಗೆ 60 ರೂಪಾಯಿ ಮತ್ತು ಅರ್ಧ ಚಾರ್ಜ್ ಮಾಡಲು 40 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕೆಲವೆಡೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಪ್ರಾರಂಭವಾಗಿದ್ದು, ಹೊಸ ವ್ಯವಹಾರ ಶುರುವಾಗಿದೆ.
ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಮೊಬೈಲ್ ಚಾರ್ಜ್ಗಾಗಿ ಕಾಲೇಜು ಯುವಕರು ಮುಗಿ ಬೀಳುತ್ತಿದ್ದಾರೆ. ಶಾಮಿಯಾನ ಅಂಗಡಿಯೊಂದರಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಆರಂಭಿಸಲಾಗಿದೆ. ಪ್ರತಿನಿತ್ಯ ಇಲ್ಲಿ ನೂರಾರು ಜನ ಬಂದು ತಮ್ಮ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ.
ಈ ಭಾಗದಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದೆ. ಇದನ್ನು ಸರಿಪಡಿಸಲು ಇಲಾಖೆ ಸಿಬ್ಬಂದಿ ಮುಂದಾಗುತ್ತಿಲ್ಲ ಎಂಬುದು ಜನರ ದೂರು.
ಹೇಮಾವತಿ ನದಿ ಅಬ್ಬರ: ಧಾರಾಕಾರ ಮಳೆ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಇಲ್ಲಿನ ಬೃಹತ್ ಸೇತುವೆಯೊಂದು ಮುಳುಗಿದೆ. ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಬೈಂದುವಳ್ಳಿ ಗ್ರಾಮದ ಸೇತುವೆ ಮುಳುಗಿದ್ದು, ಹತ್ತಾರು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ.
ಸೇತುವೆಗಳ ಮೇಲೆ 2ರಿಂದ 4 ಅಡಿ ನೀರು ಹರಿಯುತ್ತಿದೆ. ನದಿ ಪಾತ್ರದ ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಆವರಿಸಿದೆ. ಮಳೆ ಜೊತೆಗೆ ಬಲವಾಗಿ ಗಾಳಿಯೂ ಬೀಸುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಜಾವಳಿ, ಚಾರ್ಮಾಡಿ ಘಾಟಿಯಲ್ಲೆಲ್ಲಾ ಭಾರೀ ಮಳೆಯಾಗುತ್ತಿದೆ.
ಚಾರ್ಮಡಿ ಘಾಟ್ ರಸ್ತೆಯಲ್ಲಿ ಮಳೆ ವಾಹನ ಚಲಾಯಿಸಲಾಗದೇ ಸವಾರರು ಅಲ್ಲಲ್ಲಿ ವಾಹನ ನಿಲ್ಲಿಸಿಕೊಂಡಿದ್ದಾರೆ. ಇದರ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಇದನ್ನೂ ಓದಿ:ಕೆಸರು ಗದ್ದೆಯಾದ ಬಸ್ ನಿಲ್ದಾಣ, ಜೋಡೆತ್ತು ಕಟ್ಟಿಕೊಂಡು ಉಳುಮೆ ಮಾಡಿದ ಜನ! - Muddy Bus Stand