ಗ್ರಾಮಸ್ಥೆ ಕಲಾವತಿ ಮಾತನಾಡಿದರು (ETV Bharat) ಮಂಗಳೂರು (ದಕ್ಷಿಣ ಕನ್ನಡ) : ಬುಧವಾರ ನಸುಕಿನ ವೇಳೆ ಏರ್ಪೋರ್ಟ್‌ನಿಂದ ಹರಿದ ನೀರು ಕರಂಬಾರು ಎಂಬ ಪ್ರದೇಶದ 8 ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಿತ ಗ್ರಾಮಸ್ಥರು ಸೋಮವಾರ ವಿಮಾನ ನಿಲ್ದಾಣದ ದಾರಿಯನ್ನೇ ಮುಚ್ಚಿ ಪ್ರತಿಭಟನೆ ನಡೆಸಿದರು.
ಬುಧವಾರ ನಸುಕಿನ ವೇಳೆ 2.30 ಗಂಟೆ ಸುಮಾರಿಗೆ ಕರಂಬಾರಿನ ಏಳೆಂಟು ಮನೆಗೆ ಏಕಾಏಕಿ ಮೊಣಕಾಲು ಮುಳುಗುವಷ್ಟು ನೀರು ನುಗ್ಗಿದೆ. ಸುಖನಿದ್ರೆಯಲ್ಲಿದ್ದವರಿಗೆ ಚಾಪೆ ಒದ್ದೆಯಾದಾಗಲೇ ಮನೆಯೊಳಗೆ ನೀರು ನುಗ್ಗಿದ್ದು ಗೊತ್ತಾಗಿದೆ. ಮನೆಮಂದಿ ಹೊರಬರಲೆಂದು ಬಾಗಿಲು ತೆಗೆದರೆ, ಅಂಗಳದಲ್ಲಿ ಕೆರೆಯಂತೆ ನಿಂತಿದ್ದ ನೀರು ಒಮ್ಮೆಲೇ ಒಳಗೆ ನುಗ್ಗಿದೆ.
ದಿನಸಿ ಸಾಮಗ್ರಿಗಳು ಸೇರಿದಂತೆ ಫ್ರಿಡ್ಜ್, ಗ್ರೈಂಡರ್, ಗ್ಯಾಸ್ ಸಿಲಿಂಡರ್ ನೀರಿನಲ್ಲಿ ತೇಲಲು ಆರಂಭಿಸಿದೆ. ಮಕ್ಕಳು ಮರಿಗಳು, ವೃದ್ಧರು ಇರುವ ಈ ಮನೆಮಂದಿಗೆ ರಾತ್ರೋರಾತ್ರಿ ಏಕಾಏಕಿ ನೀರು ನುಗ್ಗಿದ್ದು, ದಿಕ್ಕುತೋಚದ ಪರಿಸ್ಥಿತಿ. ಆದರೂ ಹಾಗೂ ಹೀಗೋ ನೀರನ್ನು ಹೊರಗೆ ಹಾಕಿ ಇದ್ದಬದ್ದ ಸಾಮಗ್ರಿಗಳನ್ನು ಸುರಕ್ಷಿತಗೊಳಿಸುವ ಕೆಲಸವೂ ನಡೆದಿದೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥೆ ಕಲಾವತಿ, ಐದಾರು ವರ್ಷಗಳಿಂದ ಈ ಪರಿಸ್ಥಿತಿ ಇಲ್ಲಿನ ಜನತೆಯನ್ನು ಕಾಡುತ್ತಿದೆ. ಮಳೆ ನೀರು ಏರ್ಪೋರ್ಟ್‌ನಿಂದ ಓವರ್‌ಫ್ಲೋ ಆಗಿ ಕೆಳಗೆ ಬಂದು ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಕಾಟಾಚಾರಕ್ಕೆ ಒಂದು ಸಲ ಅತ್ತ ಸುಳಿದು ಹೋದ ಅಧಿಕಾರಿಗಳು ಆ ಬಳಿಕ ನಾಪತ್ತೆಯಾಗಿದ್ದಾರೆ. ಎಷ್ಟು ಕರೆ ಮಾಡಿದರೂ, ಫೋನ್ ಎತ್ತುವ ಜನರಿಲ್ಲ. ಕರೆ ಎತ್ತಿದರೆ ಇಂದು ಸರಿ ಮಾಡ್ತೇವೆ, ನಾಳೆ ಮಾಡ್ತೇವೆ ಎಂದು ಐದು ದಿನಗಳವರೆಗೆ ಸತಾಯಿಸಿದ್ದಾರೆ. ಆದ್ದರಿಂದ ನಾವು ಇಂದು ಏರ್ಪೋರ್ಟ್ ದಾರಿಯನ್ನೇ ಮುಚ್ಚಿ ಪ್ರತಿಭಟನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆಯ ಬಿಸಿ ಮುಟ್ಟುತ್ತಿದ್ದಂತೆ ವಿಮಾನ ನಿಲ್ದಾಣ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರ್, ಮಂಗಳೂರು ಎಸಿ, ಪಟ್ಟಣ ಪಂಚಾಯತ್ ಅಧಿಕಾರಿಗಳು ಎಲ್ಲರೂ ದೌಢಾಯಿಸಿ ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿದ್ದಾರೆ. ಪ್ರತಿ ಮನೆಗಳಿಗೆ ಒಂದು ಲಕ್ಷ, ಎರಡು ಲಕ್ಷದಂತೆ ನಷ್ಟ ಸಂಭವಿಸಿದೆ. ಅದನ್ನು ಭರಿಸದಿದ್ದಲ್ಲಿ ಮತ್ತೆ ಏರ್ಪೋರ್ಟ್ ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಚುರುಕಾದ ಮುಂಗಾರು: ಹವಾಮಾನ ಇಲಾಖೆಯಿಂದ ಐದು ದಿನ ಹೈ ಅಲರ್ಟ್ ಘೋಷಣೆ - High Alert in Coastal Districts