ಕಲಬುರಗಿ: ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ರಾಜ್ಯ ಅಷ್ಟೇ ಅಲ್ಲ, ದೇಶ ವಿದೇಶದಲ್ಲೂ ಹೆಸರುವಾಸಿ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದೇಶ ಮತ್ತು ವಿದೇಶಗಳಿಂದಲೂ ಜನರು ಬರುತ್ತಾರೆ. ಇಂತಹ ಆಸ್ಪತ್ರೆ ಕಲಬುರಗಿಯಲ್ಲೂ ಬೇರೊಬ್ಬರಿ 377 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಬೆಂಗಳೂರಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಮೇಲೆ ಅದೆಷ್ಟೋ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜನ ಅವಲಂಬಿತರಾಗಿದ್ದಾರೆ. ಅದರದಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜನ ದೂರದ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯಲು ಹರಸಾಹಸ ಪಡುತ್ತಿದ್ದರು. ಇದೀಗ ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲೇ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣವಾಗಿದ್ದು, ಇಂದು ಲೋಕಾರ್ಪಣೆಯಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 377 ಕೋಟಿ ರೂಪಾಯಿ ಅನುದಾನದಲ್ಲಿ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕಾಯ್ದೆ ಜಾರಿಯಾಗಿ 10 ವರ್ಷ ಪೂರೈಸಿದ ನೆನಪಿಗಾಗಿ 371 ಬೆಡ್ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. 2016 ರಲ್ಲಿ ಜಿಮ್ಸ್ ಆಸ್ಪತ್ರೆ ಕಟ್ಟಡದಲ್ಲಿ 130 ಬೆಡ್‌ನಿಂದ ಆರಂಭವಾದ ಜಯದೇವ ಹೃದ್ರೋಗ ಆಸ್ಪತ್ರೆ ಇದೀಗ ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ಸೌಕರ್ಯಗಳು ಒಳಗೊಂಡಂತೆ ಬೃಹತ್ ಸುಸಜ್ಜಿತ ಕಟ್ಟಡ ಲೋಕಾರ್ಪಣೆ ಆಗಿದೆ.
ನೂತನ ಆಸ್ಪತ್ರೆಯ ವಿಶೇಷತೆಗಳೇನು? ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅತ್ಯಾಧುನಿಕ 3 ಕ್ಯಾಥ್‌ಲ್ಯಾಬ್, 3 ಆಪರೇಶನ್ ಥಿಯೇಟರ್, 106 ಐಸಿಯು ಬೆಡ್, ಎಮ್‌ಆರ್‌ಐ, ಸಿಟಿ ಸ್ಕ್ಯಾನ್ ಸೇರಿದಂತೆ ವಿಶ್ವದರ್ಜೆಯ ಅತ್ಯಾಧುನಿಕ ಚಿಕಿತ್ಸೆ ಸೌಲಭ್ಯಗಳನ್ನ ಕಲ್ಪಿಸಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಸಿಗಲಿದ್ದು, ಎಪಿಎಲ್ ಕಾರ್ಡ್‌ದಾರರಿಗೆ ಅಲ್ಪ ಮೊತ್ತದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ನೂತನ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣದಿಂದ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಕಲಬುರಗಿಯನ್ನ ಮೆಡಿಕಲ್ ಹಬ್ ಮಾಡಲು ಸರ್ಕಾರ ಮುಂದಾಗಿದೆ. ನಗರದಲ್ಲಿನ ಹಳೆ ಜಯದೇವ ಆಸ್ಪತ್ರೆಯಲ್ಲಿ ಈವರೆಗೆ 5.78 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲು ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, 2025 ರ ಜನವರಿಯಿಂದ ಕಲಬುರಗಿಯ ನೂತನ ಜಯದೇವ ಹೃದ್ರೋಗ ಆಸ್ಪತ್ರೆ ಜನರ ಸೇವೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲೂ ಮಕ್ಕಳಿಗೆ ಆಟದ ಜೊತೆ ಪಾಠ; ಚಿಲ್ಡ್ರನ್ಸ್ ಫ್ರೆಂಡ್ಲಿ ವಾರ್ಡ್ ತೆರೆದ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ