ಹೈದರಾಬಾದ್: ಪುಷ್ಪ-2 ಸಿನಿಮಾ ಬಿಡುಗಡೆಯ ದಿನದಂದು ನಡೆದ ಕಾಲ್ತುಳಿತದಲ್ಲಿ ಮಹಿಳಾ ಅಭಿಮಾನಿಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸಿನಿಮಾ ನಾಯಕ ನಟ ಅಲ್ಲು ಅರ್ಜುನ್ ಅವರ ಮನೆಯ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿದೆ.
ಇಲ್ಲಿನ ಜುಬ್ಲಿ ಹಿಲ್ಸ್ನಲ್ಲಿನ ಟಾಲಿವುಡ್ ನಟನ ಮನೆಯ ಮುಂದೆ ಒಯು ಜೆಎಸಿ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಿಳಾ ಅಭಿಮಾನಿ ಸಾವಿಗೆ ನಾಯಕನೇ ಕಾರಣ ಎಂದು ಘೋಷಣೆ ಕೂಗಿದರು. ಇದೇ ವೇಳೆ ಕೆಲ ಕಾರ್ಯಕರ್ತರು ನಟನ ಮನೆಯ ಆವರಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಅಲ್ಲಿದ್ದ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆಯಲು ಮುಂದಾದಾಗ, ಉದ್ವಿಗ್ನತೆ ಉಂಟಾಗಿದೆ. ರೊಚ್ಚಿಗೆದ್ದ ಪ್ರತಿಭಟನಾಕಾರರು, ಮನೆಯ ಆವರಣದಲ್ಲಿದ್ದ ಹೂಕುಂಡಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿಬ್ಬಂದಿ ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಸೂಕ್ತ ಪರಿಹಾರಕ್ಕೆ ಆಗ್ರಹ: ಮಹಿಳಾ ಅಭಿಮಾನಿ ಸಾವು ಮತ್ತು ಆಕೆಯ ಪುತ್ರ ಕೋಮಾ ಸ್ಥಿತಿಯಲ್ಲಿದ್ದು ಸಂತ್ರಸ್ತ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಹಲವರನ್ನು ತಮ್ಮ ವಶಕ್ಕೆ ಪಡೆದರು.
ಜೊತೆಗೆ ಭದ್ರತೆಯ ಹಿನ್ನೆಲೆಯಲ್ಲಿ ಮನೆಯ ಬಳಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಘಟನೆ ವೇಳೆ ನಟ ಅಲ್ಲು ಅರ್ಜುನ್ ತಮ್ಮ ನಿವಾಸದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಕಲ್ಲು ತೂರಾಟದ ಕುರಿತು ಭದ್ರತಾ ಸಿಬ್ಬಂದಿ ಜುಬ್ಲಿಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡುವ ಸಾಧ್ಯತೆ ಇದೆ.
ಘಟನೆಯ ವಿಡಿಯೋ ಬಿಡುಗಡೆ: ಸಿನಿಮಾ ಬಿಡುಗಡೆಯ ಹಿಂದಿನ ದಿನ ನಾಯಕ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ಗೆ ಬಂದ ವೇಳೆ ನಡೆದ ಕಾಲ್ತುಳಿಯ ಘಟನೆಯ ಕುರಿತ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಮಾಧ್ಯಮಗೋಷ್ಟಿ ಆಯೋಜಿಸಿದ ನಗರ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ.
ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಬರಲು ಪೊಲೀಸರು ಅನುಮತಿ ನೀಡಿರಲಿಲ್ಲ. ನಿಯಮ ಮೀರಿ ನಾಯಕ ಸಿನಿಮಾ ನೋಡಲು ಬಂದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಘಟನೆಯ ಕುರಿತು ನಾಯಕ ನಟ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಪೊಲೀಸರ ಜೊತೆಗೆ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇನ್ನು ಮುಂದೆ ಅವರ ಖಾಸಗಿ ಅಂಗರಕ್ಷಕರು ಪೊಲೀಸರನ್ನು ಮುಟ್ಟಿದರೆ, ಅನುಚಿತವಾಗಿ ವರ್ತಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Watch- 'ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ, ಏಕೆಂದರೆ..': ನಟ ಅಲ್ಲು ಅರ್ಜುನ್