ಬೆಂಗಳೂರು: ಕೇಂದ್ರ ಸರ್ಕಾರದ SDRF ಮಾರ್ಗಸೂಚಿಗಳ ಪ್ರಕಾರ NDRF ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ ಒಟ್ಟು ರೂ.636.45 ಕೋಟಿಗಳನ್ನು ಈಗಾಗಲೇ ಫೆಬ್ರುವರಿ ಹಾಗೂ ಮಾರ್ಚ್ ಮಾಹೆಗಳಲ್ಲಿ ಪಾವತಿಸಲಾಗಿದೆ. ಈ ಪೈಕಿ 4,43,691 ಅತೀ ಕಡಿಮೆ ಜಮೀನು ಇರುವ ರೈತರಿಗೆ SDRF ಮಾರ್ಗಸೂಚಿಗಳನ್ವಯ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯ ಸರ್ಕಾರ ರಾಜ್ಯದ ರೈತರಿಗೆ NDRF ಅಡಿ ಬರ ಪರಿಹಾರ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅದಾದ ಬಳಿಕ ಏ.26ರಂದು ರೂ.3,454.22 ಕೋಟಿಗಳನ್ನು ಕೇಂದ್ರ ಸರ್ಕಾರ NDRF ಅಡಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಕೇಂದ್ರದಿಂದ ಹಣ ಬಿಡುಗಡೆ ಅಗುತ್ತಿದಂತೆಯೇ ಅರ್ಹ ರೈತರಿಗೆ ಪರಿಹಾರ ಪಾವತಿಸಲು ತಕ್ಷಣ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಏ. 27 ಮತ್ತು 28ರಂದು ಎರಡು ದಿನಗಳು ರಜಾದಿನಗಳು. ನಂತರ 29 ಮತ್ತು 30 ಏಪ್ರಿಲ್ ಎರಡು ದಿನಗಳಂದು ಬಾಕಿ ಉಳಿದ ಬೆಳೆ ಹಾನಿ ಪರಿಹಾರ ನೀಡಲು ಎಲ್ಲ ತಾಂತ್ರಿಕ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಮೇ 1 ರಂದು ಪುನಃ ಕಾರ್ಮಿಕ ದಿನಾಚರಣೆ ನಿಮಿತ್ತ ಸರ್ಕಾರಿ ರಜಾ ದಿನವಾಗಿರುತ್ತದೆ. ಮೊದಲ ಹಂತದ ಬೆಳೆ ಹಾನಿ ಪರಿಹಾರ ನೀಡಿ ಇನ್ನುಳಿದ ಬಾಕಿ ಮೊತ್ತಕ್ಕೆ SDRF ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಅನುಸಾರ ಎಲ್ಲ ಅರ್ಹ ರೈತರಿಗೆ ಪಾವತಿ ಮಾಡಲು ಆಯುಕ್ತರು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇವರಿಗೆ ರೂ. 3,454.22 ಕೋಟಿಗಳನ್ನು ಬಿಡುಗಡೆಗೊಳಿಸಲು ಮೇ 2 ರಂದು ಆದೇಶ ಹೊರಡಿಸಲಾಗಿದೆ ಎಂದು ವಿವರಿಸಿದ್ದಾರೆ.