ಕರ್ನಾಟಕ

karnataka

ETV Bharat / state

89ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದ ಹಿರಿಯಜ್ಜ: ಯುವಕರಿಗೆ ಮಾದರಿಯಾದ ಅಜ್ಜನ ಸಾಧನೆ

ಧಾರವಾಡ ಜಯನಗರದ ನಿವಾಸಿ, ನಿವೃತ್ತ ಶಿಕ್ಷಕ ಮಾರ್ಕಂಡೇಯ ದೊಡ್ಡಮನಿ (89) ಅವರು ಕವಿವಿಯಿಂದ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದು ಸಾಧನೆ ಮಾಡಿದ್ದಾರೆ.

By ETV Bharat Karnataka Team

Published : Feb 17, 2024, 10:19 AM IST

Updated : Feb 17, 2024, 11:55 AM IST

ಪಿಎಚ್​ಡಿ ಪಡೆದ ಹಿರಿಯಜ್ಜ  PhD  ನಿವೃತ್ತ ಶಿಕ್ಷಕ ಮಾರ್ಕಂಡೇಯ ದೊಡ್ಡಮನಿ  ಶಿವಶರಣ ಡೋಹರ ಕಕ್ಕಯ್ಯ  Dohara Kakkaya
ಇಳಿಯ ವಯಸ್ಸಿನಲ್ಲಿ ಪಿಎಚ್​ಡಿ ಪಡೆದ ಹಿರಿಯಜ್ಜನ ಸಾಧನೆ ಯುವಕರಿಗೆ ಮಾದರಿ

ಇಳಿಯ ವಯಸ್ಸಿನಲ್ಲಿ ಪಿಎಚ್​ಡಿ ಪಡೆದ ಹಿರಿಯಜ್ಜನ ಸಾಧನೆ ಯುವಕರಿಗೆ ಮಾದರಿ

ಧಾರವಾಡ:ಇಳಿ ವಯಸ್ಸಿನಲ್ಲಿ ಪಿಎಚ್​ಡಿ ಪದವಿ ಪಡೆದುಕೊಂಡು ಹಿರಿಯಜ್ಜನೊಬ್ಬ ಯುವಕರಿಗೆ ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಳಿ ವಯಸ್ಸಿನಲ್ಲಿ ಪಿಎಚ್​ಡಿ ಪದವಿ ಪಡೆದು ವಿಶೇಷವಾದ ಸಾಧನೆ ಮಾಡಿದ್ದಾರೆ. ತಮ್ಮ 89ನೇ ವಯಸ್ಸಿನಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪಡೆದುಕೊಂಡು ಗಮನ ಸೆಳೆದಿದ್ದಾರೆ.

ಧಾರವಾಡ ಜಯನಗರದ ನಿವಾಸಿಯಾಗಿರುವ ಮಾರ್ಕಂಡೇಯ ದೊಡ್ಡಮನಿ ಅವರಿಗೆ ಈಗ 89 ವಯಸ್ಸು. ನಿವೃತ್ತ ಶಿಕ್ಷಕರಾಗಿರುವ ಇವರು ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ. ಸತತ 18 ವರ್ಷಗಳ ಕಾಲ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ, 'ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ' ಎಂಬ ಮಹಾಪ್ರಬಂಧವನ್ನು ಮಂಡಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪದವಿ ಜೊತೆಗೆ ಡಾಕ್ಟರ್ ಮಾರ್ಕಂಡೇಯ ಆಗಿ ಹೊರಹೊಮ್ಮಿದ್ದಾರೆ.

ಡೋಹರ ಕಕ್ಕಯ್ಯನವರ ಕೇವಲ 6 ವಚನಗಳು ಮಾತ್ರವಿದೆ. ಹೀಗಾಗಿ ಯಾರೂ ಸಹ ಇಲ್ಲಿಯವರೆಗೆ ಈ ಬಗ್ಗೆ ಅಧ್ಯಯನ ಮಾಡುವ ವಿಚಾರ ಮಾಡಿರಲಿಲ್ಲ. ಆದರೆ, ಇತರ ಶರಣರ ವಚನಗಳಲ್ಲಿ ಕಕ್ಕಯ್ಯನವರ ಪ್ರಸ್ತಾಪವಾಗಿದೆ. ಅದನ್ನೆಲ್ಲ ಪರಿಶೀಲಿಸಿ, ಕಕ್ಕಯ್ಯನವರು ಭೇಟಿ ನೀಡಿದ್ದ ಕಾದ್ರೋಳ್ಳಿ, ಕಕ್ಕೇರಿ ಸ್ಥಳಗಳಿಗೂ ಭೇಟಿ ನೀಡಿ, ಸಂಪೂರ್ಣ ಸಂಶೋಧನೆ ಮಾಡಿ, 150 ಪುಟಗಳ ಈ ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಇಲ್ಲಿಯವರೆಗೆ 79 ವರ್ಷ ವಯಸ್ಸಿನವರೆಗೂ ಪಿಎಚ್​ಡಿ ಪದವಿ ಪಡೆದುಕೊಂಡವರು ಇದ್ದರು. ಆದರೆ, ಈಗ ಇವರು ಅದನ್ನೆಲ್ಲ ಮೀರಿ ತಮ್ಮ 89ನೇ ವಯಸ್ಸಿನಲ್ಲಿ ಪ್ರಬಂಧವನ್ನು ಮಂಡಿಸಿ, ತಮ್ಮ ಹೆಸರಿನಲ್ಲಿ ಹೊಸ ದಾಖಲೆ ಉಳಿಯುವಂತೆ ಮಾಡಿದ್ದಾರೆ. ಮಾರ್ಕಂಡೇಯ ದೊಡ್ಡಮನಿ ಅವರ ಸಾಧನೆಯು ಎಲ್ಲರಲ್ಲಿ ಖುಷಿ ತಂದಿದೆ.

ಪಿಎಚ್​ಡಿ ಪಡೆದ ಮಾರ್ಕಂಡೇಯ ದೊಡ್ಡಮನಿ ಮಾತು:''ನನಗೆ ಮೊದಲಿನಿಂದಲೂ ಪಿಎಚ್​ಡಿ ಮಾಡಬೇಕು ಎನ್ನುವ ಆಸೆಯಿತ್ತು. ಯಾವ ವಿಷಯ ತೆಗೆದುಕೊಳ್ಳಬೇಕು ಎಂದು ಯೋಚನೆಯಲ್ಲಿ ತೊಡಗಿದ್ದೆ. ಆಗ ಶಿವಶರಣ ಹರಳಯ್ಯನಿಗೆ ಸರಿಸಮಾನವಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ ಶಿವಶರಣ ಡೋಹರ ಕಕ್ಕಯ್ಯ ಅವರ ವಿಚಾರ ಹೊಳೆಯಿತು. ಪ್ರೊ. ಆರ್​.ಎಸ್. ತಳವಾರ ಅವರ ಮಾರ್ಗದರ್ಶನದಲ್ಲಿ, ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ ವಿಷಯ ಆಧರಿಸಿ ಸಂಶೋಧನಾ ಅಧ್ಯಯನ ಆರಂಭಿಸಿದೆ. ಆದರೆ, ಪ್ರೊ.ಆರ್​.ಎಸ್. ತಳವಾರ ಅವರ ನಿಧನದ ನಂತರ ನನ್ನ ಅಧ್ಯಯನಕ್ಕೆ ಹೆಚ್ಚು ಕಾಲ ಹಿಡಿಯಿತು.

ಕವಿವಿಯ ಕನ್ನಡ ವಿಭಾಗದ ಮುಖ್ಯಸ್ಥರು ಸಹಾಯ ಮಾಡಿದರು. ನಾನು ಬರೆದ ಎಲ್ಲ ಪುಸ್ತಕಗಳನ್ನು ಕವಿವಿಯ ಪ್ರೊ.ನಿಜಲಿಂಗ ಮಟ್ಟಿಹಾಳ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೊ.ನಿಜಲಿಂಗ ಮಟ್ಟಿಹಾಳ ಅವರ ಸಲಹೆ ಮೇರೆಗೆ, ಪ್ರೊ.ನಿಂಗಪ್ಪ ಮುದೇನೂರು ಅವರ ಮಾರ್ಗದರ್ಶನದಲ್ಲಿ ಪಿಎಚ್​ಡಿ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಕಕ್ಕಯ್ಯನವರು ಭೇಟಿ ನೀಡಿದ್ದ ಕಾದ್ರೋಳ್ಳಿ, ಕಕ್ಕೇರಿ ಸ್ಥಳಗಳಿಗೂ ಭೇಟಿ ನೀಡಿ ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ರಚಿಸಿದ್ದೇನೆ'' ಎಂದು ಪಿಎಚ್​ಡಿ ಪಡೆದ ಮಾರ್ಕಂಡೇಯ ದೊಡ್ಡಮನಿ ಹೇಳಿದರು.

ಇದನ್ನೂ ಓದಿ:ಕಡಬ: ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ವೃದ್ಧ ದಂಪತಿ

Last Updated : Feb 17, 2024, 11:55 AM IST

ABOUT THE AUTHOR

...view details