ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣತೆ ಹೆಚ್ಚಳವಾಗುತ್ತಿದ್ದು, ಕಲಬುರಗಿಯಲ್ಲಿ ಶುಕ್ರವಾರ (ಮಾರ್ಚ್ 29) ಗರಿಷ್ಠ ತಾಪಮಾನ 40.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ತಿಂಗಳು ನಗರದ ತಾಪಮಾನದಲ್ಲಿ ಭಾರಿ ಹೆಚ್ಚಳವಾಗಿದ್ದು, ಗರಿಷ್ಠ ತಾಪಮಾನ 40.9 ಡಿಗ್ರಿ ಸೆಲ್ಸಿಯಸ್ (ಕಲಬುರಗಿಯಲ್ಲಿ) ಮತ್ತು ಕನಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ (ಚಿಕ್ಕಮಗಳೂರಿನಲ್ಲಿ) ವರದಿಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಎರಡು ದಿನ ಸಹ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ. ಮುಂದಿನ ಎರಡು ದಿನ ಒಳನಾಡಿನ ಒಂದೆರಡು ಕಡೆ ಗರಿಷ್ಠ ತಾಪಮಾನ ಇನ್ನೂ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ತಲುಪಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.