ಕರ್ನಾಟಕ

karnataka

ETV Bharat / state

ಐಷಾರಾಮಿ ಕಾರು ಅಪಘಾತದಲ್ಲಿ ಟೆಕ್ಕಿ ಸಾವು; ಪ್ರಕರಣದಲ್ಲಿ ಯಾವುದೇ ಗೊಂದಲ​ ಇಲ್ಲವೆಂದ ಕಮಿಷನರ್​ ಬಿ.ದಯಾನಂದ್

ಅಪಘಾತದಲ್ಲಿ ಟೆಕ್ಕಿ ಸಾವು ಪ್ರಕರಣದಲ್ಲಿ ಯಾವುದೇ ಗೊಂದಲವಿಲ್ಲ ಎಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಆರೋಪಿಯೋರ್ವನನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಮೃತ ಟೆಕ್ಕಿ ಸಂಧ್ಯಾ
ಮೃತ ಟೆಕ್ಕಿ ಸಂಧ್ಯಾ (ETV Bharat)

By ETV Bharat Karnataka Team

Published : Nov 5, 2024, 1:50 PM IST

ಬೆಂಗಳೂರು : ಕೆಂಗೇರಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

ನವೆಂಬರ್ 2ರಂದು ಸಂಜೆ ಕೆಂಗೇರಿ ಬಸ್ ನಿಲ್ದಾಣದ ಬಳಿ ಮರ್ಸಿಡೀಸ್​ ಬೆಂಜ್ ಕಾರಿನಿಂದ ಸಂಭವಿಸಿದ್ದ ಅಪಘಾತದಲ್ಲಿ ಪಾದಚಾರಿ ಸಂಧ್ಯಾ (30) ಎಂಬ ಸಾಫ್ಟ್‌ವೇರ್ ಉದ್ಯೋಗಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾರು ಚಾಲಕ ಧನುಷ್​ನನ್ನು ಬಂಧಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ (ETV Bharat)

ಪ್ರಕರಣದ ಕುರಿತು ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ''ಮಹಿಳೆಯೊಬ್ಬರಿಗೆ ಡಿಕ್ಕಿಯಾಗಿ ನಂತರ ದ್ವಿಚಕ್ರ ವಾಹನಕ್ಕೂ ಸಹ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಸಂಧ್ಯಾ ಎಂಬ ಮಹಿಳೆ ಸಾವನ್ನಪ್ಪಿದ್ದರು. ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಆರೋಪಿಯು ಪಾನಮತ್ತನಾಗಿ ಅಪಘಾತವೆಸಗಿರುವುದು ಕಂಡು ಬಂದಿದೆ. ಆತನ ರಕ್ತದ ಮಾದರಿಯನ್ನ ಪಡೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣವನ್ನು ಉದ್ದೇಶ ಪೂರ್ವಕವಲ್ಲದ ಹತ್ಯೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿತ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣವನ್ನು ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು'' ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಅಪಘಾತದ ಬಳಿಕ ಆರೋಪಿಗೆ ರಕ್ಷಣೆ ನೀಡಲಾಗುತ್ತಿದೆ ಹಾಗೂ ಪ್ರಕರಣ ದಾಖಲಿಸದಂತೆ ಮೃತಳ ಕುಟುಂಬಕ್ಕೆ‌ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೆ, ಯಾವುದೇ ಊಹಾಪೋಹಗಳಿಗೆ ಆಸ್ಪದವಿಲ್ಲ. ಆರೋಪಿಯ ರಕ್ಷಣೆಯ ಪ್ರಶ್ನೆಯಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವು‌: ದರೋಡೆಕೋರರಿಂದ ಪಾರಾಗುವ ಯತ್ನದಲ್ಲಿ ಅಪಘಾತ ಶಂಕೆ

ABOUT THE AUTHOR

...view details