ಚಿಕ್ಕಮಗಳೂರು:ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೂಡಿಗೆ ಗ್ರಾಮದಲ್ಲಿ ನಡೆದಿದೆ. ಸುಭಿಕ್ಷಾ (26 ವರ್ಷ) ಮೃತರು. ಸುಭಿಕ್ಷಾ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಆಕೆಯ ತವರು ಮನೆಯವರು ಅನುಮಾನ ವ್ಯಕ್ತಪಡಿಸಿ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ಸುಭಿಕ್ಷಾ ತಂದೆ ಚಿನ್ನೇಗೌಡ ತನ್ನ ಮಗಳಿಗೆ ಪತಿ, ಮಾವ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ತನ್ನ ಮಗಳ ಸಾವಿನ ಬಗ್ಗೆ ಅನುಮಾನವಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬಾಳೂರು ಪೊಲೀಸರು ಮೃತ ಸುಭಿಕ್ಷಾ ಪತಿ ಎಂ.ಸಿ.ಪ್ರವೀಣ, ಮಾವ ಚಂದ್ರೇಗೌಡ, ಅತ್ತೆ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮೂಡಿಗೆರೆ ತಹಶೀಲ್ದಾರ್ ಮತ್ತು ಡಿವೈಎಸ್ಪಿ ಅವರ ಸಮ್ಮುಖದಲ್ಲಿ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ ನಂತರ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.