ಶಿವಮೊಗ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 30 ವರ್ಷದ ವ್ಯಕ್ತಿಗೆ ಶಿವಮೊಗ್ಗ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ FTSC-1 ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.12 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
2023ನೇ ವರ್ಷದಲ್ಲಿ ಭದ್ರಾವತಿ ತಾಲೂಕಿನಲ್ಲಿ ತನ್ನ ಮೇಲೆ 30 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ನೊಂದ ಬಾಲಕಿಯೇ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಭದ್ರಾವತಿಯ ಸಿಪಿಐ ತನಿಖಾಧಿಕಾರಿಗಳಾದ ಶ್ರೀಶೈಲ ಕುಮಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಅರೋಪಿಯ ವಿರುದ್ಧ ದೋಪಾರೋಷಣಾ ಪತ್ರವನ್ನು ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.12 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಪರಿಹಾರದ ಮೊತ್ತದಲ್ಲಿ 1 ಲಕ್ಷ ರೂ. ಮತ್ತು ಸರ್ಕಾರದಿಂದ 5 ಲಕ್ಷ ರೂ. ನೊಂದ ಬಾಲಕಿಗೆ ನೀಡಲು ಆದೇಶ ನೀಡಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಇಂತಹದ್ದೇ ಮತ್ತೊಂದು ಪ್ರಕರಣ ನಡೆದದ್ದು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು 9 ವರ್ಷದ ಅಪ್ರಾಪ್ತ ಬಾಲಕಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ತನಿಖೆ ನಡೆಸಿದ ನ್ಯೂ ಟೌನ್ ಪೊಲೀಸ್ ಠಾಣೆಯ ಸಿಪಿಐ ಶಾಂತಿನಾಥ್ ಅವರು ತನಿಖೆಯ ದೋಷಾರೋಪಣ ಪಟ್ಟಿಯನ್ನು ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ಇಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮೋಹನ್ ಜೆ.ಎಸ್. ಅವರು 43 ವರ್ಷದ ಆರೋಪಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 51 ಸಾವಿರ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ, 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ. ಪರಿಹಾರದ ರೂಪವಾಗಿ ದಂಡದ ಮೊತ್ತದಲ್ಲಿ 50 ಸಾವಿರ ರೂ. ಮತ್ತು ಸರ್ಕಾರ 2 ಲಕ್ಷ ರೂ. ನೀಡಬೇಕೆಂದು ಆದೇಶಿಸಿದೆ.
ಎರಡು ಪ್ರಕರಣದಲ್ಲಿ ಸರ್ಕಾರ ಅಭಿಯೋಜಕರಾದ ಶ್ರೀಧರ್ ಹೆಚ್.ಆರ್ ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ: 8ರ ಬಾಲಕಿಯ ರೇಪ್ ಅಂಡ್ ಮರ್ಡರ್ ಪ್ರಕರಣ: ಮೂವರಿಗೆ ಮರಣ ದಂಡನೆ