ಮೈಸೂರು: ಬಿಜೆಪಿಯ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ಕುರಿತು ಸಂಸದ ಡಾ.ಸುಧಾಕರ್ ಅವರು ನಿನ್ನೆ ನೀಡಿದ ಹೇಳಿಕೆ ಕೇಳಿ ನನಗೂ ಅಚ್ಚರಿ ತಂದಿದೆ. ಜಿಲ್ಲಾಧ್ಯಕ್ಷರ ಆಯ್ಕೆ ನಾನು ಮಾಡಿದಲ್ಲ. ಅದು ಚುನಾವಣಾ ಪ್ರಕ್ರಿಯೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ನೇಮಕದಲ್ಲಿ ನನ್ನ ಯಾವ ಪತ್ರವೂ ಇಲ್ಲ. ನನ್ನ ಯಾವ ಪಾತ್ರವೂ ಬರುವುದಿಲ್ಲ. ಅಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಏಕಂದರೆ ಅದರ ಚುನಾವಣೆ ಉಸ್ತುವಾರಿ ಹೊತ್ತವರೇ ಬೇರೆ. ಬಿಜೆಪಿ ಸಂಘಟನೆ ಪರ್ವ ಕಳೆದ 4-5 ತಿಂಗಳಿನಿಂದ ನಡೆದುಕೊಂಡು ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಸೀಮಿತವಾಗಿ ಹೇಳುವುದಾದರೆ, ನಮ್ಮ ಚುನಾವಣೆಯ ಉಸ್ತುವಾರಿಗಳು ಜಿಲ್ಲೆಗೆ ಭೇಟಿ ನೀಡಿ, ಎಲ್ಲರ ಅಭಿಪ್ರಾಯ ಪಡೆದೇ ಮೂವರು ಹೆಸರುಗಳನ್ನು ಆಯ್ಕೆ ಮಾಡಿದ್ದರು. ಅವರು ನೀಡಿದ ಹೆಸರುಗಳನ್ನೇ ದೆಹಲಿಗೆ ಕಳುಹಿಸಲಾಗಿತ್ತು. ದೆಹಲಿಯಿಂದ ಬಂದ ನಂತರ ಆ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಹಾಗಾಗಿ ಈ ರೀತಿ ಮಾತನಾಡಿರಬಹುದು. ಮುಂದೆ ನಾನು ಸುಧಾಕರ್ ಅವರನ್ನು ಭೇಟಿ ಮಾಡಿ ಮಾತನಾಡುವೆ ಎಂದರು.
ಟೀಕೆಗಳಿಂದ ಪಾಠ : ಬಿಜೆಪಿಯಲ್ಲಿಯೇ ವಿಜಯೇಂದ್ರ ಟಾರ್ಗೆಟ್ ಆಗುತ್ತಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುವುದೆನ್ನಲ್ಲ ನಾನು ಹೇಳುವುದಿಲ್ಲ. ನನಗೆ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಅವರ ಏಳು-ಬೀಳುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ ಎಲ್ಲರ ಟೀಕೆಗಳಿಂದ ಪಾಠ ಕಲಿತಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲುವ ಪ್ರಯತ್ನ ಮಾಡುವೆ ಎಂದರು.
ಸುಧಾಕರ್ ನನಗೆ ಫೋನ್ ಮಾಡಿಲ್ಲ :ನನಗೆ ಸುಧಾಕರ್ ಅವರು ಯಾವುದೇ ಫೋನ್ ಕರೆ ಮಾಡಿಲ್ಲ. ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೇಸೆಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿತ್ತು. ಹೀಗಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕರೆ ಮಾಡಿಲ್ಲ. ಅಂತಹ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಅವರು ಟೀಕೆ ಮಾಡಿದ್ದಾರೋ ಗೊತ್ತಿಲ್ಲ. ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ, ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸುತ್ತಿದ್ದೇನೆ. ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮುಖ್ಯ. ನಾನು ಯಡಿಯೂರಪ್ಪನವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಯೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷವಾಗಿದ್ದೇನೆ ಅಷ್ಟೇ. ಸುಧಾಕರ್ ಅವರ ಬಾಯಿಲ್ಲಿ ಯುದ್ಧದ ಮಾತು ಯಾಕೆ ಬಂತು ಅನ್ನೋದು ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ ಎಂದು ವಿಜಯೇಂದ್ರ ಹೇಳಿದರು.