ಕಡಬ (ದಕ್ಷಿಣ ಕನ್ನಡ) :ಕಡಬದ ಸರ್ಕಾರಿ ಕಾಲೇಜು ಆವರಣದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗುತ್ತಿದ್ದ ಆರೋಪಿ ಆಬೀನ್ನನ್ನು ಶಾಲಾ ವಿದ್ಯಾರ್ಥಿಗಳು ಬೆನ್ನಟ್ಟಿಕೊಂಡು ಹೋಗಿ ಹಿಡಿದು ತರುತ್ತಿರುವ ಎಕ್ಸ್ಲೂಸಿವ್ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ಕಡಬದ ಸರ್ಕಾರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಗುರಿಯಾಗಿಸಿ ಸೋಮವಾರ ಬೆಳಗ್ಗೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ಎಂಬಿಎ ವಿದ್ಯಾರ್ಥಿ ಆಬೀನ್ ಕೃತ್ಯ ಎಸಗಲಿ ಎಂದು ಭಾನುವಾರ ತನ್ನ ಹುಟ್ಟೂರಾದ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದು, ನಂತರ ಕಡಬಕ್ಕೆ ಆಗಮಿಸಿದ್ದ. ಅಲ್ಲಿನ ಬೇಕರಿಯೊಂದರ ಸಿಸಿಟಿವಿಯಲ್ಲಿ ಈತನ ಚಲನವಲನಗಳು ಈ ಮೊದಲು ಪತ್ತೆಯಾಗಿತ್ತು.
ಆಬೀನ್ ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿ. ಭಾನುವಾರ ಮಧ್ಯಾಹ್ನ ರೈಲಿನ ಮೂಲಕ ನಿಲಂಬೂರಿನಿಂದ ಹೊರಟ ಆತ ರಾತ್ರಿ ವೇಳೆ ಮಂಗಳೂರು ರೈಲು ನಿಲ್ದಾಣ ತಲುಪಿದ್ದ. ಅಲ್ಲಿಯೇ ಬೆಳಿಗ್ಗೆಯವರೆಗೆ ಕಾಲ ಕಳೆದ ಅವರು ಬಳಿಕ ಮಂಗಳೂರಿನಿಂದ ಬಸ್ ಹಿಡಿದು ಕಡಬಕ್ಕೆ ಆಗಮಿಸಿದ್ದ ಎಂಬುದು ತಿಳಿದುಬಂದಿದೆ. ಆಬೀನ್ ಕಾಲೇಜ್ ಪ್ರವೇಶಿಸುವುದಕ್ಕೆ ಮುಂಚೆ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿಕೊಂಡು ಶಾಲಾ ಆವರಣ ಪ್ರವೇಶಿಸಿದ್ದ ಎಂದು ತಿಳಿದುಬಂದಿತ್ತು.