ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹುಬ್ಬಳ್ಳಿ:ಲೋಕಸಭಾ ಬಿಜೆಪಿ ಪ್ರಚಾರ ಕಾರ್ಯಾಲಯ ಉದ್ಘಾಟನೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಜರಾಗದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಪ್ರಚಾರ ಕಾರ್ಯಾಲಯದ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಈ ಕುರಿತು ಮೂರು ದಿನ ಮುಂಚೆಯೇ ಹೇಳಲಾಗಿತ್ತು. ಆದರೆ ಅನ್ಯ ಕಾರ್ಯದ ಹಿನ್ನೆಲೆ ಶೆಟ್ಟರ್ ಬೆಂಗಳೂರಿಗೆ ಹೋಗಿದ್ದಾರೆ. ಮುಂದಿನ ಕಾರ್ಯಕ್ರಮಗಳಲ್ಲಿ ಅವರು ಖಂಡಿತ ಪಾಲ್ಗೊಳ್ತಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅವರ ಬೆಂಬಲಿಗರ ಸೇರ್ಪಡೆ ಕುರಿತು ಚರ್ಚೆ ನಡೆದಿದೆ ಎಂದರು.
ವಾರದೊಳಗಾಗಿ ಶೆಟ್ಟರ್ ಬೆಂಬಲಿಗರ ಸೇರ್ಪಡೆ:ಒಂದು ವಾರದೊಳಗಾಗಿ ಅವರ ಬೆಂಬಲಿಗರ ಸೇರ್ಪಡೆಯಾಗುತ್ತದೆ. ಅದರ ನಂತರ ಎಲ್ಲವೂ ಸರಿಹೋಗುತ್ತೆ. ಜಗದೀಶ್ ಶೆಟ್ಟರ್ ಇತ್ತೀಚಿಗಷ್ಟೇ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.
ತುಮಕೂರು ಟಿಕೆಟ್ ವಿಚಾರದಲ್ಲಿ ನನ್ನ ಜೊತೆ ಮಾಜಿ ಸಚಿವರಾದ ವಿ ಸೋಮಣ್ಣ ಮತ್ತು ಜೆ ಸಿ ಮಾಧುಸ್ವಾಮಿ ಅವರು ನನ್ನೊಂದಿಗೆ ಮಾತನಾಡಿದ್ದು, ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ವಿಶ್ವಾಸದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ನಾಯಕರು ಮಾಡುವ ತೀರ್ಮಾನಕ್ಕೆ ಎಲ್ಲರೂ ಹೊಂದಿಕೊಂಡು ಹೋಗುತ್ತಾರೆ. ಬಹಳ ಜನ ಆಕಾಂಕ್ಷಿಗಳಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಜೆಡಿಎಸ್ ಚಿಹ್ನೆ ಅಡಿ ಬಿಜೆಪಿ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಅಖಾಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಿಂದ ಮತದಾರರಿಗೆ ಯಾವುದೇ ಗೊಂದಲವಾಗಲ್ಲ. ಯಾವ ಚಿಹ್ನೆ ಯಾರದ್ದು ಅನ್ನೋದು ಜನರಿಗೆ ಗೊತ್ತಿದೆ. ಯಾರು ಯಾರ ಜೊತೆಗಿದ್ದಾರೆ, ಯಾರು ಬೆನ್ನಲ್ಲಿ ಚೂರಿ ಹಾಕ್ತಾರೆ ಅಂತಾ ಜನರಿಗೆ ಗೊತ್ತಿದೆ. ಅಭ್ಯರ್ಥಿ ಮತ್ತು ಪಕ್ಷವನ್ನು ನೋಡಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ದೇವಾಲಯ ಆದಾಯ ಮೇಲೆ ತೆರಿಗೆ ವಿಧಿಸಿದರೆ ಹೋರಾಟ:ದೇವಸ್ಥಾನದ ಹಣವನ್ನು ರಾಜ್ಯ ಸರ್ಕಾರ ಲೂಟಿ ಹೊಡೆಯುತ್ತಿದೆ. ಹಿಂದು ದೇವಾಲಯಗಳ ಆದಾಯದ ಮೇಲೂ ಸರ್ಕಾರ ಕಣ್ಣು ಹಾಕಿದೆ. ಕಾಂಗ್ರೆಸ್ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಶಕ್ತಿ ಮೀರಿ ಹೋರಾಟ ಮಾಡುತ್ತೇವೆ. ಒಂದು ವೇಳೆ ದೇವಾಲಯಗಳ ಆದಾಯದ ಮೇಲೆ ತೆರಿಗೆ ಹಾಕಿದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸಚಿವ ಜೋಶಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಲಾಡ್ಗೆ ಟಾರ್ಗೆಟ್ ಇದೆ:ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್‌ನವರು ಟಾರ್ಗೆಟ್ ಕೊಟ್ಟಿದ್ದಾರೆ. ಮೋದಿ, ಜೋಶಿ ಬೈಯಬೇಕು ಅಂತಾ ಟಾರ್ಗೆಟ್ ಕೊಟ್ಟಿದ್ದಾರೆ. ನಮ್ಮನ್ನು ಬೈಯದಿದ್ದಲ್ಲಿ ಲಾಡ್ ಮಂತ್ರಿಗಿರಿ ಹೋಗುತ್ತೆ, ಲಾಡ್ ಆರೋಪದಲ್ಲಿ ಯಾವುದಕ್ಕಾದರೂ ಗಂಭೀರತೆ ಇದೆಯಾ ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬ್ಯಾನ್:ಸರ್ದಾರ್ ಪಟೇಲರು ಮೊದಲು ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ರು, ಸತ್ಯ ಗೊತ್ತಾದಾಗ ನಿಷೇಧವನ್ನು ಹಿಂಪಡೆದ್ರು. ಗೋವಾ ಮತ್ತು ಹೈದರಾಬಾದ್ ಪ್ರಾಂತ್ಯಗಳ ವಿಮೋಚನೆಗೆ ಸೈನ್ಯ ಕಳಿಸಲು ನೆಹರು ಒಪ್ಪಿದ್ದಿಲ್ಲ. ಆದರೆ ಸರ್ದಾರ್ ಪಟೇಲರು ಸೈನ್ಯ ತೆಗೆದುಕೊಂಡು ಹೋಗಿ ವಿಮೋಚನೆ ಮಾಡಿದ್ರು. ಪಟೇಲರು ಗುಜರಾತ್ ನವರು ಅನ್ನೋ ಕಾರಣಕ್ಕೆ ದೊಡ್ಡ ಪ್ರತಿಮೆ ಮಾಡಲಾಗಿದೆ. ಆದರೆ ಲಾಡ್ ಪ್ರತಿಯೊಂದು ವಿಷಯದಲ್ಲೂ ಪಾಲಿಸಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಧಾರವಾಡದಲ್ಲಿ ಬಿಜೆಪಿ ಐತಿಹಾಸಿಕ ವಿಜಯ ದಾಖಲಿಸುತ್ತೆ:ಅತ್ಯಂತ ಖುಷಿಯಿಂದ ಇಂದು ಲೋಕಸಭಾ ಚುನಾವಣೆಯ ಪ್ರಚಾರ ಕಚೇರಿಯನ್ನು ಉದ್ಘಾಟಿಸಿದ್ದೇನೆ. ಬಿಜೆಪಿ ಕಚೇರಿಯನ್ನೇ ಚುನಾವಣೆ ಕಚೇರಿಯನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದೇವೆ. ನಮ್ಮ ಹೊಸ ಕಚೇರಿ ರೆಡಿಯಾಗಿದೆ. ಈ ಕಾರ್ಯಾಲಯದಿಂದ ಪ್ರಚಾರ ಆರಂಭಿಸಿದವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆಯನ್ನೂ ಇದೇ ಕಚೇರಿಯಿಂದ ಮಾಡಲು ತೀರ್ಮಾನಿಸಿದ್ದೇನೆ ಎಂದರು.
ಧಾರವಾಡದಲ್ಲಿ ಬಿಜೆಪಿ ಐತಿಹಾಸಿಕ ವಿಜಯ ದಾಖಲಿಸುತ್ತೆ. ಮೋದಿ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು: ಸಿಎಂ ಸಿದ್ದರಾಮಯ್ಯ