ಮೈಸೂರು: ಪಾರಿವಾಳಗಳಿಗೆ ಧಾನ್ಯ ಚೆಲ್ಲುವುದನ್ನು ನಿಷೇಧಿಸಿ, ಅರಮನೆಯ ಸೌಂದರ್ಯ ಹಾಗೂ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು (ಕೌಟಿಲ್ಯರಘು) ಪತ್ರ ಬರೆದಿದ್ದಾರೆ.
ಅರಮನೆಯ ಅಂದಗೆಡುತ್ತಿದೆ, ಆವರಣ ಕಲುಷಿತವಾಗಿದೆ: ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರದ ಮುಂಭಾಗ ಕೆಲವರು ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ತಂದು ಸುರಿಯುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಹಾರಿ ಬರುವ ಪಾರಿವಾಳಗಳು ಅರಮನೆಯ ಅಂದಗೆಡಿಸುತ್ತಿವೆ. ನಾಲ್ವಡಿಯವರ ತಂದೆ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಹಾಗೂ ಅದರ ಆವರಣ ಸಂಪೂರ್ಣ ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾರಿತ್ರಿಕ ಕೊಡುಗೆಗಳನ್ನು ನೀಡಿದ ಅವರನ್ನು ನಿತ್ಯವೂ ಅಪಮಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ, ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿ:ಅರಮನೆಯ ಸುತ್ತಮುತ್ತ ವ್ಯಾಪಾರವನ್ನು ಆಶ್ರಯಿಸಿರುವ, ದೇವಸ್ಥಾನಗಳ ಪೂಜಾ ಕೈಂಕರ್ಯ ಕೈಗೊಳ್ಳುವ ಅರ್ಚಕರು ಹಾಗೂ ಭೇಟಿ ನೀಡುವ ಸಾರ್ವಜನಿಕರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ. ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗುತ್ತಿದೆ. ಮೈಸೂರಿನ ಹೆಮ್ಮೆಯ, ವಿಶ್ವ ವಿಖ್ಯಾತ ಸುಂದರ ಅರಮನೆಯ ಆಯಕಟ್ಟಿನ ಸ್ಥಳಗಳಲ್ಲಿ ಗೂಡು ಕಟ್ಟಿಕೊಂಡಿರುವ ಪಾರಿವಾಳಗಳು ಅರಮನೆಯ ಸೌಂದರ್ಯ ಹಾಗೂ ಕಟ್ಟಡದ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಅವರು ವಿವರಿಸಿದ್ದಾರೆ.