ಬೆಂಗಳೂರು:"ನಮ್ಮದು ಶಿಸ್ತಿನ ಪಕ್ಷ, ರಾಜ್ಯದಲ್ಲಿ 71 ಲಕ್ಷ ಕಾರ್ಯಕರ್ತರಿದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಬೇರೆ ಇರುತ್ತದೆ. ಕಾಲವೇ ಸರಿಯಾದ ಉತ್ತರ ಕೊಡಲಿದೆ, ಕಾಲವೇ ಸರಿ ಮಾಡಲಿದೆ" ಎಂದು ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನದ ಕುರಿತು ಕರ್ನಾಟಕ ರಾಜ್ಯ ಉಸ್ತುವಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ರಾಧಾ ಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಮೇರೆಗೆ ಇಂದು ಬೆಂಗಳೂರಿಗೆ ಆಗಮಿಸಿದ್ದ ಡಾ.ರಾಧಾ ಮೋಹನ್ ದಾಸ್ ಅಗರವಾಲ್ ಅವರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ್ ಅವರಿಂದ ರಾಜ್ಯ ನಾಯಕತ್ವದ ಕುರಿತು ಬಹಿರಂಗ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, "ಪಕ್ಷದಲ್ಲಿ ನಡೆಯುತ್ತಿರುವ ವಿಚಾರಗಳು ನಮಗೆ ಆತಂಕ ಮೂಡಿಸಿದೆ. ನಾವು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಕೊಟ್ಟಿದ್ದೇವೆ. ಇನ್ನೂ ಅವರು ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟಿಲ್ಲ. ಅವರ ಉತ್ತರದ ಆಧಾರದ ಮೇಲೆ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದರು.
ವಿಜಯೇಂದ್ರ ಬದಲಾವಣೆಗೆ ಯತ್ನಾಳ್ ಆಗ್ರಹ ಬಗ್ಗೆ ಮಾತನಾಡಿ, "ಪಕ್ಷದ ವರಿಷ್ಠರು ರಾಜ್ಯಾಧ್ಯಕ್ಷನನ್ನು ನೇಮಕ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿರುವುದು ಹೈಕಮಾಂಡ್ಗೆ ಔಚಿತ್ಯ ಅನಿಸಿದೆ. ಪಕ್ಷದಲ್ಲಿ ವಿಜಯೇಂದ್ರ ವರ್ಸಸ್ ಯತ್ನಾಳ್ ತಂಡ ಅಂತ ಇಲ್ಲ. ಆದರೆ ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದು ಹೇಳಿದರು. ನೋಟಿಸ್ಗೆ ಉತ್ತರ ಕೊಟ್ಟಿರುವ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ, "ಯತ್ನಾಳ್ ಉತ್ತರ ಕೊಟ್ಟಿರುವುದು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಬಿಜೆಪಿ ಬಣ ಬಡಿದಾಟಕ್ಕೆ ಮದ್ದು ಅರೆಯುವುದೇ ಕೋರ್ ಕಮಿಟಿ ಸಭೆ?