ಕರ್ನಾಟಕ

karnataka

ETV Bharat / state

'ಕುಂಭಮೇಳ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವ, ರಾಜಕೀಯ ನಾಯಕರು ಟೀಕಿಸುವ ವಿಚಾರವಲ್ಲ' - SRI SUBUDHENDRA SWAMIJI

ಮಹಾ ಕುಂಭಮೇಳದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರತಿಕ್ರಿಯಿಸಿದ್ದಾರೆ.

RAICHUR  MAHAKUMBH STAMPEDE  ಶ್ರೀ ಸುಬುಧೇಂದ್ರ ಸ್ವಾಮೀಜಿ  MALLIKARJUN KHARGE STATEMENT
ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ (ETV Bharat)

By ETV Bharat Karnataka Team

Published : Jan 30, 2025, 9:40 AM IST

ರಾಯಚೂರು:ಮಹಾಕುಂಭಮೇಳ ಧಾರ್ಮಿಕ ಶ್ರದ್ಧೆಯ ಸಂಗತಿ. ಇದು ರಾಜಕೀಯ ನಾಯಕರು ಟೀಕಿಸುವ ವಿಚಾರವಾಗಬಾರದು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.

ರಾಯಚೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗಂಗಾಸ್ನಾನದಿಂದ ಬಡತನ ದೂರವಾಗಲ್ಲ" ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಪ್ರತಿಕ್ರಿಯೆ (ETV Bharat)

"ಗಂಗಾಸ್ನಾನದಿಂದ ಬಡತನ ‌ನೀಗುತ್ತೆ ಅಂತ ಯಾರೂ ಹೇಳಿಲ್ಲ. ಗಂಗಾ ಸ್ನಾನ ಎನ್ನುವುದು ಒಂದು ಭಾವನೆಗೆ ಒಳಪಟ್ಟದ್ದು. ಪವಿತ್ರತೆಗೆ ಕಾರಣವಾಗುವಂಥದ್ದು. ನಮ್ಮ ಪಾಪಗಳು ಪರಿಹಾರವಾಗುತ್ತವೆ. ದೇಹ ಮತ್ತು ಮನಸ್ಸಿನ ಶುದ್ಧಿಯಾಗುತ್ತದೆ. ಗಂಗಾ ಸ್ನಾನ ಮಾಡಿದರೆ ಸಾಲ ಪರಿಹಾರವಾಗದು. ಸನಾತನ ಹಿಂದೂ ಧರ್ಮವನ್ನು ಟೀಕಿಸುವುದನ್ನೇ ಪ್ರಧಾನವಾಗಿ ಇಟ್ಟುಕೊಳ್ಳಬಾರದು. ಕುಂಭಮೇಳ ಒಂದು ಧಾರ್ಮಿಕ ವಿಚಾರವಾಗಿರುವುದರಿಂದ ಅದನ್ನು ಟೀಕಿಸುವುದು ಅತ್ಯಂತ ಖಂಡನೀಯ" ಎಂದರು.

"ಕುಂಭಮೇಳ ಸಮಸ್ತ ಹಿಂದೂಗಳ ಶ್ರದ್ಧಾ ಉತ್ಸವ. ದೇಶ-ವಿದೇಶದಿಂದ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಮೇಳಕ್ಕೆ ಬರುತ್ತಿದ್ದಾರೆ. ಲಕ್ಷಾಂತರ ಭಕ್ತರು ಈಗಾಗಲೇ ಪುಣ್ಯಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಸೇರಿ ಕಾಲ್ತುಳಿತವಾಗಿ, ಭಕ್ತರ ಸಾವುಗಳು ಸಂಭವಿಸಿದ್ದು, ಅತ್ಯಂತ ವಿಷಾದನೀಯ ಸಂಗತಿ" ಎಂದು ಹೇಳಿದರು.

"ಕುಂಭಮೇಳಕ್ಕಾಗಿ ಅಲ್ಲಿನ ಸರ್ಕಾರ ಅತ್ಯಂತ ಉತ್ತಮ ವ್ಯವಸ್ಥೆಗಳನ್ನು ಮಾಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ ಅವರು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಭಕ್ತರು ಸಹ ಸ್ವಯಂ ಜಾಗೃತವಹಿಸಬೇಕು. ನಿಯಮ ಪಾಲನೆಯ ಜೊತೆಗೆ ತಾಳ್ಮೆಯಿಂದಿರಬೇಕು. ಅಲ್ಲಿನ ನಿಯಮಗಳಿಗೆ ಬೆಲೆ ಕೊಟ್ಟು ಅವುಗಳನ್ನು ಪಾಲಿಸಬೇಕು. ಆಗ ಇಂತಹ ದುರಂತಗಳು ಯಾವ ಕ್ಷೇತ್ರದಲ್ಲಿಯೂ ನಡೆಯುವುದಿಲ್ಲ. ಕಾಲ್ತುಳಿತದಲ್ಲಿ ಮೃತಪಟ್ಟರಿಗೆ ಸದ್ಗತಿ ದೊರೆಯಲಿ. ಮೃತರ ಕುಟುಂಬದವರಿಗೆ ಶಾಂತಿ ಮತ್ತು ಧೈರ್ಯವನ್ನು ಭಗವಂತ ನೀಡಲಿ. ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಲಿ" ಎಂದು ಸ್ವಾಮೀಜಿ ತಿಳಿಸಿದರು.

ಇದನ್ನೂ ಓದಿ:ಹಠ ಮಾಡಿ ಪ್ರಯಾಗ್​ರಾಜ್​ಗೆ ಹೋದ ಮಗಳು, ಸಾವಿಗೂ ಮುನ್ನ ಫೇಸ್‌ಬುಕ್​ ಲೈವ್; ಪತ್ನಿ, ಮಗಳ ಕಳ್ಕೊಂಡು ಒಂಟಿಯಾದ ವ್ಯಕ್ತಿ

ABOUT THE AUTHOR

...view details