ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ತಮ್ಮ ಜಾತಿಯವರನ್ನು ಪ್ರೀತಿಸಿದಷ್ಟು ಬೇರಾವುದೇ ಜಾತಿಯವರನ್ನು ಪ್ರೀತಿಸುವುದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಭಾಷಣ ಮಾಡುವಾಗ ಹೇಳಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವೈರತ್ವ ಮತ್ತು ದ್ವೇಷ ಉಂಟುಮಾಡುವ ಹೇಳಿಕೆ ನಿಡಿದ್ದಾರೆ ಎಂದು ಆರ್.ಕುಮಾರಸ್ವಾಮಿ ಎಂಬವರು ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನವಲಗುಂದ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿಗಳ ಕಾಯ್ದೆ 1950, 1951, 1989 (u/s-123 (3A), 125), IPC 1890 (u/s-505(2)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವೇರುತ್ತಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಹಿಂಪಡೆದುಕೊಂಡಿದ್ದರು. ಹೀಗಿದ್ದರೂ ಅವರು ಪ್ರಹ್ಲಾದ್ ಜೋಶಿ ವಿರುದ್ದ ವಾಗ್ದಾಳಿ ಮುಂದುವರೆಸಿದ್ದಾರೆ.