ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ನಡುವಿನ ಗಲಾಟೆಯಿಂದ 3 ಗಂಟೆಯ ಬಳಿಕ ಪುನಃ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಎರಡೂ ಪಕ್ಷಗಳ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿದರು. ಕಲಾಪ ಮುಂದೂಡಿದ ನಂತರ ಸಿ.ಟಿ.ರವಿ ಅವರನ್ನು ಕಾಂಗ್ರೆಸ್ ಸದಸ್ಯರು ಹಿಗ್ಗಾಮುಗ್ಗಾ ಬೈದಾಡಿದ ಘಟನೆಯೂ ನಡೆಯಿತು.
ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪ ಸುವರ್ಣ ವಿಧಾನಸೌಧದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಯಿತು. ಅಲ್ಲದೇ ಸಿ.ಟಿ.ರವಿ ಕಾರಿಗೆ ಮುತ್ತಿಗೆ ಹಾಕಿ, ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಲು ಕೂಡಾ ಮುಂದಾದರು. ಇದರಿಂದ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಗಿತ್ತು. ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯರು ಸಭಾಪತಿಗಳ ಕೊಠಡಿಯಲ್ಲಿ ಸುಮಾರು ಗಂಟೆ ಕಾಲ ಸಭೆ ನಡೆಸಿದರು.
ಸಭಾಪತಿಗಳು ಎರಡೂ ಪಕ್ಷದ ಸದಸ್ಯರಿಗೆ ಆತ್ಮಾವಲೋಕನದ ಪಾಠ ಮಾಡಿ ಹೊರ ನಡೆದ ನಂತರ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಸದಸ್ಯರು ಮುಗಿಬಿದ್ದರು. ಸಿ.ಟಿ.ರವಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಅರಿತ ಮಾರ್ಷಲ್ಗಳು ಭದ್ರತೆಯಲ್ಲಿ ಸಿ.ಟಿ.ರವಿ ಅವರನ್ನು ಹೊರಗಡೆ ಕರೆದೊಯ್ದರು.