ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿಕೆ (ETV Bharat) ದಾವಣಗೆರೆ: "ಸಿದ್ದೇಶ್ವರ್ ಮೊದಲು ಟೂರಿಂಗ್ ಟಾಕೀಸ್ನಲ್ಲಿ ಟಿಕೆಟ್ ಹರಿಯುತ್ತಿದ್ದರು. ನಂತರ ಅಡಿಕೆ ಮಾರಾಟ ಕೆಲಸಕ್ಕೆ ಬಂದ್ರು. ಇವರ ಅಭಿವೃದ್ಧಿ ಶೂನ್ಯ" ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ವಿರುದ್ಧ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಅವರು, "ದಾವಣಗೆರೆಯಲ್ಲಿ ಕೆಲ ಹಿರಿಯರು ಬಿಜೆಪಿ ಕಟ್ಟಿದರು. ಹಳೆ ಹಾಗೂ ಹೊಸ ಊರಿನಲ್ಲೂ ಪಕ್ಷ ಸಂಘಟನೆ ಮಾಡಿದರು. ಇವರು ಏನ್ ಮಾಡಿದ್ದಾರೆ?. ಇವರ ಹೆಸರು ಎಲ್ಲಿತ್ತು?. ಅವಾಗ ಇವರು ಎಲ್ಲಿದ್ದರು?. ಇವರದ್ದು ಒಂದು ಟೂರಿಂಗ್ ಟಾಕೀಸ್ ಇತ್ತು. ರೀಲ್ ತರಲು ಬೆಂಗಳೂರಿಗೆ ಹೋಗುತ್ತಿದ್ದರು" ಎಂದು ಟೀಕಿಸಿದರು.
"ಮಂಜಣ್ಣ ಮತ್ತು ಇವರು ಪಾರ್ಟ್ನರ್ಶಿಪ್ ಮಾಡಿಕೊಂಡಿದ್ದರು. ಅಂಬಾಸಿಡರ್ ಕಾರಿನಲ್ಲಿ ರೀಲ್ ಹಾಕಿಕೊಂಡು ಬಂದು, ಅವರು ನಡೆಸುತ್ತಿದ್ದ ಟೂರಿಂಗ್ ಟಾಕೀಸ್ನಲ್ಲಿ ಟಿಕೆಟ್ ಹರಿಯುತ್ತಿದ್ದರು. ಆಮೇಲೆ ಅಡಿಕೆ ಮಾರಾಟ ಮಾಡುವ ಕೆಲಸಕ್ಕೆ ಬಂದರು" ಎಂದು ವ್ಯಂಗ್ಯವಾಡಿದರು.
"ಇವರ ಅಪ್ಪ ಒಳ್ಳೆ ಮನುಷ್ಯರಾಗಿದ್ದರು. ಸಮಾಜದ ಅಧ್ಯಕ್ಷರಾಗಿದ್ದರಿಂದ ಬಿಜೆಪಿಯಿಂದ ಅವರಿಗೆ ಟಿಕೆಟ್ ಕೊಟ್ರು, ಸಂಸದರಾದ್ರು. ಆದ್ರೆ ಇವರದ್ದೇನಿದೆ ಎಫರ್ಟ್?. ಅಭಿವೃದ್ಧಿ ಝೀರೋ. ಇವರ ಕಾಲದಲ್ಲಿ ಏನ್ ಕೆಲಸಗಳಾಗಿವೆ?. ನನ್ನ ಅವಧಿಯಲ್ಲಿ ಕೆಲಸಗಳಾಗಿವೆ" ಎಂದರು.
ಇಬ್ಬರು ಬಾಡಿಗಾರ್ಡ್ ಇಟ್ಟುಕೊಂಡಿದ್ದಾರೆ: "ಅದರಲ್ಲೂ ಇವರು ಇಬ್ಬರು ಬಾಡಿಗಾರ್ಡ್ಗಳನ್ನು ಇಟ್ಟುಕೊಂಡಿದ್ದಾರೆ. ಇಲ್ಲಿ ಬಾಡಿಗಾರ್ಡ್ಗಳದ್ದು ಏನೂ ನಡೆಯುವುದಿಲ್ಲ. ಇವರು ಅಶೋಕ ಟಾಕೀಸ್ ಬಳಿ ಮಾಡಿರುವ ಅಂಡರ್ ಪಾಸ್ ಜಿಲೇಬಿ ರೀತಿ ಇದೆ. ಅಲ್ಲಿ ಇವರ ಪ್ರತಿಮೆ ನಿರ್ಮಿಸಿ, ನಾನು ಹಣ ಕೊಡ್ತೀನಿ ಎಂದು ಟಾಂಗ್ ಕೊಟ್ಟರು.
ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ: ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಬಗ್ಗೆ ಪ್ರತಿಕ್ರಿಯಿಸಿ, ರವೀಂದ್ರನಾಥ್ ಹಿರಿಯರು. ಅವರಿಗೆ ಗೌರವ ಕೊಡ್ಬೇಕು. ಅವರ ಬಳಿ ನಾವು ಚುನಾವಣೆ ಬಗ್ಗೆ ಹೇಳಿಲ್ಲ. ನನಗೆ ಕರೆದಿಲ್ಲ, ಮಾತನಾಡಿಲ್ಲ. ಇದೆಲ್ಲಾ ಅವರಾಗಿಯೇ ಸೃಷ್ಟಿ ಮಾಡಿದ್ದಾರೆ. ರವೀಂದ್ರನಾಥ್ ನಮಗೆ ಅಣ್ಣ ಆಗ್ಬೇಕು. ಮತ ಕೇಳಲು ಅವರ ಮನೆಗೆ ಹೋಗ್ಬಾರ್ದಾ?. ಸಿಕ್ಕವರನ್ನು ಮಾತನಾಡಿಸಬಾರದಾ? ಕರೆದರೆ ಹೋಳಿಗೆ ಊಟ ಮಾಡಿ ಕರಿಯಿರಿ ಎಂದು ಹೇಳುವೆ" ಎಂದರು.
ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ರೇಣುಕಾಚಾರ್ಯ ಬಂದಿದ್ರು: "ಈ ಹಿಂದೆ ಎಂ.ಪಿ.ರೇಣುಕಾಚಾರ್ಯರನ್ನು ಸಾಕಷ್ಟು ಬಾರಿ ಭೇಟಿ ಆಗಿದ್ದೇನೆ. ಹಲವು ಬಾರಿ ನಿಮ್ಮ ಪಾರ್ಟಿಗೆ ಬರುತ್ತೇನೆ ಎಂದು ಅವರು ಹೇಳಿದ್ದರು. ನಮ್ಮ ಪಕ್ಷಕ್ಕೆ ಕರೆದುಕೊಳ್ಳುವವರು ಯಾರು ಎಂದಿದ್ದೆ? ಆದ್ರೆ ಅವರು ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗಿಂದಲೂ ನನ್ನ ಬಳಿ ಬರಲೇ ಇಲ್ಲ. ಅವರ ಪಾಡಿಗೆ ಅವರು, ನಮ್ಮ ಪಾಡಿಗೆ ನಾವು ಲೋಕಸಭಾ ಚುನಾವಣೆ ಮಾಡಿದ್ದೇವೆ" ಎಂದು ಹೇಳಿದರು.
ಇದನ್ನೂ ಓದಿ:ದಾವಣಗೆರೆ: ಸಚಿವರಿಗಾಗಿ ಕಾದು ಸುಸ್ತಾದ ನರೇಗಾ ಕಾರ್ಮಿಕರು; ಅಧಿಕಾರಿಗಳ ವಿರುದ್ಧ ಆಕ್ರೋಶ