ಬೆಂಗಳೂರು: ಯುವತಿಯೋರ್ವಳನ್ನು ಆಕೆಯ ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಇಂದಿರಾ ನಗರ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ಅಸ್ಸಾಂನ ಗುವಾಹಟಿ ಮೂಲದ ಮಾಯಾ ಗೊಗೋಯ್ (19) ಹತ್ಯೆಯಾಗಿರುವ ಯುವತಿ. ಹತ್ಯೆಯ ಬಳಿಕ ಆಕೆಯ ಸ್ನೇಹಿತ ಕೇರಳದ ಕಣ್ಣೂರು ಮೂಲದ ಆರವ್ ಹನೋಯ್ (21) ಎಂಬಾತ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹತ್ಯೆಯಾದ ಮಾಯಾ ಗೊಗೋಯ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದಳು. ನವೆಂಬರ್ 23ರಂದು ಮಾಯಾ ಹಾಗೂ ಆಕೆಯ ಸ್ನೇಹಿತ ಆರವ್ ಹನೋಯ್ ಇಂದಿರಾನಗರ 2ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ರೂಮ್ ಪಡೆದು ತಂಗಿದ್ದರು. ಆದರೆ, ಇಂದು ಬೆಳಿಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಆರವ್ ಹನೋಯ್ ಮಾತ್ರ ಅಪಾರ್ಟ್‌ಮೆಂಟ್‌ನಿಂದ ತೆರಳಿದ್ದಾನೆ. ಹೋಟೆಲ್ ಸಿಬ್ಬಂದಿ ಗಮನಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ''ಇಂದಿರಾನಗರ ವ್ಯಾಪ್ತಿಯ ದಿ ರಾಯಲ್ ಲಿವಿಂಗ್ ಕೋ ಲಿವಿಂಗ್ ಸ್ಪೇಸ್‌ನಲ್ಲಿರುವ ರೂಮೊಂದರಲ್ಲಿ ವಾಸನೆ ಬರುತ್ತಿದೆ ಎಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಅಸ್ಸಾಂ ಮೂಲದ ಮಾಯಾ ಗೊಗೋಯ್ ಎಂಬಾಕೆ ಮೃತದೇಹ ಪತ್ತೆಯಾಗಿದ್ದು, ಸಾಕಷ್ಟು ಬಾರಿ ಆಕೆಯ ದೇಹದಲ್ಲಿ ಇರಿದಿರುವುದು ಹಾಗೂ ತಲೆಯಲ್ಲಿ ಸಹ ಗಾಯಗಳು ಕಂಡು ಬಂದಿವೆ. ಸೋಕೋ ಟೀಂ (Scene Of Crime Officers) ನಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ ಮೃತ ಯುವತಿ ಹಾಗೂ ಆರೋಪಿ ಆರವ್ ಹನೋಯ್ ನವೆಂಬರ್ 23ರಂದು ಬಂದು ರೂಮ್ ಪಡೆದಿದ್ದು, ಇಂದು ಬೆಳಗ್ಗೆ 8:19ಕ್ಕೆ ಆರೋಪಿ ಮಾತ್ರ ವಾಪಸ್ ಆಗಿರುವುದು ತಿಳಿದು ಬಂದಿದೆ. ಬಳಿಕ ಆತ ಬೇರೆಡೆ ತೆರಳಿ ಮೊಬೈಲ್ ಆಫ್ ಮಾಡಿದ್ದಾನೆ. ಕೃತ್ಯ ನಡೆದ ರೂಮ್ ಪರಿಶೀಲಿಸಿದಾಗ ಆರೋಪಿ ನೈಲಾನ್ ಹಗ್ಗವೊಂದನ್ನ ಆನ್‌ಲೈನ್‌ನಲ್ಲಿ ಬುಕ್ ಮಾಡಿ ತರಿಸಿಕೊಂಡಿರುವುದು ಹಾಗೂ ಹಳೆಯ ಚಾಕುವೊಂದನ್ನ ಬಳಸಿ ಹತ್ಯೆ ಮಾಡಿರುವುದು ತಿಳಿದು ಬಂದಿದ್ದು, ಪೂರ್ವನಿಯೋಜಿತ ಕೃತ್ಯ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ಮಾಯಾ ಹಾಗೂ ಆರೋಪಿಯ ನಡುವೆ ಪರಿಚಯ, ಸ್ನೇಹವಿದ್ದ ಬಗ್ಗೆ ಆಕೆಯ ಸಹೋದರಿ ಮಾಹಿತಿ ನೀಡಿದ್ದಾರೆ. ಸದ್ಯ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಆರೋಪಿಯ ಪತ್ತೆಕಾರ್ಯ ಮುಂದುವರೆಸಿದ್ದೇವೆ. ಆರೋಪಿಯ ಬಂಧನದ ಬಳಿಕ ಕೃತ್ಯಕ್ಕೆ ನಿಖರ ಕಾರಣ ಗೊತ್ತಾಗಬೇಕಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದಾಪುರದಲ್ಲಿ 8 ವರ್ಷದ ಹಿಂದೆ ಕೊಲೆ; ತಲೆ ಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸ್ ಬಲೆಗೆ