ಸಿದ್ದಗಂಗಾ ಶಾಲೆಗೆ ದಾಖಲಿಸುತ್ತಿರುವ ಹಳೆ ವಿದ್ಯಾರ್ಥಿಗಳು (ETV Bharat) ತುಮಕೂರು: ತ್ರಿವಿಧ ದಾಸೋಹದ ಪವಿತ್ರ ಕ್ಷೇತ್ರ ಶ್ರೀಸಿದ್ದಗಂಗಾ ಮಠದಲ್ಲಿ ಸಾವಿರಾರು ಬಡ ಕುಟುಂಬದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಈ ರೀತಿ ಸಂಸ್ಕಾರಯುತ ಶಿಕ್ಷಣ ಪಡೆದು ತಮ್ಮ ಬದುಕಿನಲ್ಲಿ ಸಾರ್ಥಕತೆ ಕಂಡ ನಂತರ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೂ ಕೂಡ ಇದು ಲಭಿಸಲಿ ಎಂಬ ಮಹತ್ವದ ಉದ್ದೇಶದಿಂದ ಸದ್ದಿಲ್ಲದೇ ವಿಭಿನ್ನವಾದ ಸೇವೆಯಲ್ಲಿ ಹಳೆ ವಿದ್ಯಾರ್ಥಿಗಳು ತೊಡಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಳೆ ವಿದ್ಯಾರ್ಥಿಗಳು ತಮ್ಮ ಗ್ರಾಮದ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದು ಇಲ್ಲಿ ಶಾಲಾ ದಾಖಲಾತಿ ಪ್ರಕ್ರಿಯೆಗೆ ಸಹಕರಿಸುತ್ತಿರುವುದು ವಿಶೇಷವಾಗಿದೆ.
ಸಿದ್ದಗಂಗಾ ಮಠ (ETV Bharat) ಹೌದು, ಸಿದ್ದಗಂಗಾ ಮಠದಲ್ಲಿ ಈಗಾಗಲೇ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಸಾವಿರಾರು ಮಕ್ಕಳು ಸಂಸ್ಕಾರಯುತ ಶಿಕ್ಷಣಕ್ಕಾಗಿ ಮಠಕ್ಕೆ ಬರುತ್ತಿದ್ದಾರೆ. ಅಲ್ಲದೇ ಮಠದಲ್ಲಿ ವಸತಿ, ಆಹಾರ ಹಾಗೂ ಶಿಕ್ಷಣಕ್ಕೆ ಪೂರಕವಾಗಿ ಅವರ ಪೋಷಕರು ಬಂದು ದಾಖಲು ಮಾಡುತ್ತಿದ್ದಾರೆ.
ಗ್ರಾಮೀಣ ಮಕ್ಕಳನ್ನು ಸಿದ್ದಗಂಗಾ ಶಾಲೆಗೆ ದಾಖಲಿಸುತ್ತಿರುವ ಹಳೆ ವಿದ್ಯಾರ್ಥಿಗಳು (ETV Bharat) 15 ದಿನಗಳಿಂದ ಸಿದ್ದಗಂಗಾ ಮಠಕ್ಕೆ ಬಂದು ಮಕ್ಕಳನ್ನು ಬಿಟ್ಟು ಹೋಗುತ್ತಿದ್ದಾರೆ. ಇಷ್ಟು ದಿನ ತಂದೆ ತಾಯಿಯೊಂದಿಗೆ ಇದ್ದು ಇದೀಗ ಮಠಕ್ಕೆ ಸೇರ್ಪಡೆಗೊಳ್ಳುತ್ತಿರುವ ಮಕ್ಕಳು ಅವರನ್ನು ಬಿಟ್ಟಿರದೇ ಕಣ್ಣೀರು ಹಾಕುತ್ತಿದ್ದು, ಇಂತಹ ದೃಶ್ಯ ಸರ್ವೇ ಸಾಮಾನ್ಯವಾಗಿದೆ.
ಪ್ರತಿ ವರ್ಷ ಸಿದ್ದಗಂಗಾ ಮಠಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಇದುವರೆಗೂ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ನಮ್ಮಂತೆಯೇ ಮಠದಲ್ಲಿ ಶಿಕ್ಷಣ ದೊರೆಯಲಿ ಅಲ್ಲದೇ ಅವರು ಬದುಕು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಗ್ರಾಮದ ಮಕ್ಕಳನ್ನು ಪೋಷಕರ ಮನವೊಲಿಸಿ ಇಲ್ಲಿ ದಾಖಲು ಮಾಡುತ್ತಿದ್ದೇವೆ ಎಂದು ಹಳೆಯ ವಿದ್ಯಾರ್ಥಿ ಶಿವಮೂರ್ತಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳನ್ನು ಸಿದ್ದಗಂಗಾ ಶಾಲೆಗೆ ದಾಖಲಿಸುತ್ತಿರುವ ಹಳೆ ವಿದ್ಯಾರ್ಥಿಗಳು (ETV Bharat) ಪ್ರತಿವರ್ಷ ಕನಿಷ್ಠ 5 ರಿಂದ 6 ಮಕ್ಕಳನ್ನು ಸಂಸ್ಕಾರಯುತ ಶಿಕ್ಷಣಕ್ಕಾಗಿ ದಾಖಲು ಮಾಡುತ್ತಿದ್ದೇವೆ. ನಾನು ಕೂಡ ಇಲ್ಲಿ 10ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿ ನಂತರ ಡಿಪ್ಲೋಮೋ ಪದವಿ ಪಡೆದು ಇದೀಗ ಬದುಕು ರೂಪಿಸಿಕೊಂಡಿದ್ದೇನೆ ಎಂದು ಶಿವಮೂರ್ತಿ ಹೇಳಿದ್ದಾರೆ.
ಸಿದ್ದಗಂಗಾ ಮಠ (ETV Bharat) ನಂತರ ಮಾತನಾಡಿದ ನರಸಣ್ಣ ಎಂಬುವವರು, ನಮ್ಮ ಗ್ರಾಮದಲ್ಲಿ ಉತ್ತಮವಾದ ಶಿಕ್ಷಣ ಲಭಿಸುತ್ತಿಲ್ಲ ಎಂದು ಮನಗಂಡು ಸಿದ್ದಗಂಗಾ ಮಠದಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ಮಾಹಿತಿ ದೊರೆತ ತಕ್ಷಣ ಇಲ್ಲಿಗೆ ನಮ್ಮ ಮಕ್ಕಳನ್ನು ಕರೆದುಕೊಂಡು ಬಂದು ದಾಖಲು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಸದ್ದಿಲ್ಲದೇ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಈ ರೀತಿ ಶಾಲಾ ದಾಖಲಾತಿ ಅಂತಹ ಅಮೂಲ್ಯವಾದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ:IGNOU Exam; ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಪರೀಕ್ಷೆಯಲ್ಲಿ ಮಾಸ್ ಕಾಪಿ: ವಿಡಿಯೋ ವೈರಲ್ - Mass copying by students in exam