ಕೊಪ್ಪಳ : ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಅಪಾರ ಜನ ಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 30ರಿಂದ ಜೂನ್ 3ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಾತ್ರೆಯ ಪ್ರಮುಖಘಟ್ಟವಾದ ಮಹಾರಥೋತ್ಸವ ಇಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ನೆರವೇರಿತು.
ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಭಾಗಿ : ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂಧ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳ ಸುಮಾರು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವ ಕಣ್ತುಂಬಿಕೊಂಡರು.