ಕರ್ನಾಟಕ

karnataka

ETV Bharat / state

ಬಿಎಸ್​ವೈ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್ ಜಾರಿ: ಶೋಭಾ ಕರಂದ್ಲಾಜೆ ಹೇಳಿದ್ದೇನು? - Shobha Karandlaje

ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್​.ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿರುವ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.

Central Minister Shobha Karandlaje
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ETV Bharat)

By ETV Bharat Karnataka Team

Published : Jun 14, 2024, 6:22 PM IST

ಬೆಂಗಳೂರು: "ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಕುರಿತ ಮಾಹಿತಿ ಗೊತ್ತಿಲ್ಲ. ಮಾಧ್ಯಮದ ಮೂಲಕ ನೋಡಿದೆ. ಇದರಲ್ಲಿ ಸರ್ಕಾರದ ಪಾತ್ರವಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನ್ಯಾಯಾಲಯ ಈ ನೆಲದ ಕಾನೂನು ಎತ್ತಿ ಹಿಡಿಯಲಿದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವೆಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಮೊದಲ ಬಾರಿಗೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ಕಚೇರಿ ದ್ವಾರದಲ್ಲಿಯೇ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತ ಕೋರಿ ಕೇಂದ್ರ ಸಚಿವರನ್ನು ಬರಮಾಡಿಕೊಂಡರು. ನಂತರ ಪಕ್ಷದ ಸಂಪ್ರದಾಯದಂತೆ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾಚರ್ಚನೆ ನೆರವೇರಿಸಿದ ಶೋಭಾ ಕರಂದ್ಲಾಜೆ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಜಗನ್ನಾಥ ರಾವ್ ಜೋಷಿ ಪುತ್ಥಳಿಗೆ ನಮಿಸಿದರು. ಈ ವೇಳೆ ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, "ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸುದೀರ್ಘ ರಾಜಕೀಯ ಬದುಕು ಇದೆ. ಈ ಥರದ ಆರೋಪಗಳು ಯಡಿಯೂರಪ್ಪ ವಿರುದ್ಧ ಯಾವತ್ತೂ ಕೇಳಿ ಬಂದಿರಲಿಲ್ಲ. ಈಗ ಯಾಕೆ ಅವರ ಬಗ್ಗೆ ಈ ಥರ ಆರೋಪಗಳು ಬರುತ್ತಿವೆ ಅಂತ ಗೊತ್ತಿಲ್ಲ. ಇದರಲ್ಲಿ ಸರ್ಕಾರದ ಪಾತ್ರ ಏನಿದೆ ಅಂತ ಗೊತ್ತಿಲ್ಲ. ಹಿರಿಯ ನಾಯಕ ಯಡಿಯೂರಪ್ಪ ವಿರುದ್ಧ ಈ ಆರೋಪ ಯಾಕೆ ಬಂತು ಅಂತ ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲರ ಮೇಲೆ ಕೇಸ್ ಹಾಕುತ್ತಿರುವಂತಹ ಪ್ರಕರಣಗಳನ್ನು ಕೂಡಾ ಜನ ಗಮನಿಸುತ್ತಿದ್ದಾರೆ. ಕಾದು ನೋಡೋಣ" ಎಂದರು.

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ದರ್ಶನ್ ರಕ್ಷಣೆ ಆಗ್ತಾ ಇದೆಯಾ?: ದರ್ಶನ್​ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾರಿಗೂ ರಕ್ಷಣೆ ಇಲ್ಲ. ನಿರಂತರ ಕೊಲೆಗಳು ನಡೆಯುತ್ತಿವೆ. ಸರ್ಕಾರ ಕೊಲೆಗಡುಕರ ಪರ ಇದೆ. ಕೊಲೆಗಡುಕರಿಗೆ ರಾಜ್ಯದಲ್ಲಿ ಭಯ ಇಲ್ಲ. ನಟ ದರ್ಶನ್ ಕಾಂಗ್ರೆಸ್ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಅಂತ ಶಾಮಿಯಾನ ಹಾಕಿ ರಕ್ಷಣೆ ಮಾಡುತ್ತಿದ್ದಾರಾ? ಅವರು ಇರುವ ಠಾಣೆಗೆ ರಕ್ಷಣೆ ಕೊಡಲಾಗಿದೆ. ಜನರಿಗೊಂದು ಕಾನೂನು, ದೊಡ್ಡವರಿಗೊಂದು ಕಾನೂನು, ಕಾಂಗ್ರೆಸ್ ಕಾರ್ಯಕರ್ತರಿಗೊಂದು ಕಾನೂನು ಅನ್ನುವ ಸಂದೇಶವನ್ನು ಸರ್ಕಾರ ರವಾನಿಸಿದೆ. ಕಾನೂನು ರೀತಿಯಲ್ಲಿ ಸರ್ಕಾರ ಕ್ರಮ ವಹಿಸಲಿ. ಕಾನೂನು ಮುಂದೆ ಯಾರೂ ದೊಡ್ಡವರು, ಚಿಕ್ಕವರು ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನಿನಂತೆ ಶಿಕ್ಷೆ ಆಗಲಿ. ಕಾನೂನಿನಂತೆ ತನಿಖೆ ಆಗಲಿ. ಯಾರು ಕೊಲೆಗಡುಕರಿದ್ದಾರೋ ಅವರ ರಕ್ಷಣೆಯನ್ನು ಸರ್ಕಾರವಾಗಲಿ, ಪೊಲೀಸರಾಗಲಿ ಮಾಡಬಾರದು" ಎಂದು ಹೇಳಿದರು.

"ಕರ್ನಾಟಕ ರಾಜ್ಯದಲ್ಲಿ ಮತದಾರರು ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಲು ಅದ್ಭುತ ರೆಸ್ಪಾನ್ಸ್ ನೀಡಿದ್ದಾರೆ. ಬಿಜೆಪಿ 17, ಜೆಡಿಎಸ್‌ಗೆ ಇಬ್ಬರು ಸದಸ್ಯರನ್ನು ಗೆಲ್ಲಿಸಿ ಎನ್​ಡಿಎ‌ಗೆ 19 ಸ್ಥಾನಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಅಪ ಪ್ರಚಾರ ಮಾಡಿದರೂ, ಡಬಲ್ ಡಿಜಿಟ್ ಸಿಗಲಿಲ್ಲ" ಎಂದು ಟೀಕಿಸಿದರು.

"ಮೋದಿ ಅವರು ಮತ್ತೆ ಕೇಂದ್ರ ಸಚಿವ ಸ್ಥಾನ ಅವಕಾಶ ನೀಡಿದ್ದಾರೆ. ಎಂಎಸ್ಎಂಇ ಮಂತ್ರಿ ಮಾಡಿದ್ದಾರೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಕ್ಷೇತ್ರದ ಮುಖಂಡರು, ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲಾ ವಿರೋಧದ ನಡುವೆಯೂ ಗೆಲ್ಲಲು ಸಾಧ್ಯವಾಯ್ತು. ಮೇಕ್ ಇನ್ ಇಂಡಿಯಾ ಮೂಲಕ ಕೈಗೆ ಉದ್ಯೋಗ ನೀಡಬೇಕು. ಮುಂದಿನ ನೂರು ದಿನದಲ್ಲಿ ನಮ್ಮ ಇಲಾಖೆ ಉತ್ತುಂಗಕ್ಕೆ ಏರಿಸುವ ಪ್ರಯತ್ನ ನಡೆಯಲಿದೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಪೋಕ್ಸೋ ಕೇಸ್: ಬಿ.ಎಸ್‌.ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ - Yadiyurappa POCSO Case

ABOUT THE AUTHOR

...view details