ಶಿವಮೊಗ್ಗ:ಸಾಕು ಬೆಕ್ಕು ಕಚ್ಚಿ ರೇಬಿಸ್ ಉಂಟಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕು ತರಲಘಟ್ಟ ಕ್ಯಾಂಪ್ನಲ್ಲಿ ನಡೆದಿದೆ. ತರಲಘಟ್ಟ ಗ್ರಾಮದ ಗಂಗಿಬಾಯಿ(50) ಮೃತರು.
ಗಂಗಿಬಾಯಿಗೆ ಕಳೆದ ಎರಡೂವರೆ ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಮೊದಲ ರೇಬಿಸ್ ಇಂಜೆಕ್ಷನ್ ಪಡೆದುಕೊಂಡಿದ್ದರು. ಬಳಿಕ ಹುಷಾರಾಗಿದ್ದೇನೆ ಎಂದು ಪೂರ್ಣ ಇಂಜೆಕ್ಷನ್ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.
ಇಂಜೆಕ್ಷನ್ ಪಡೆಯಲು ನಿರ್ಲಕ್ಷ್ಯ: ಗ್ರಾಮದ ಆಶಾ ಕಾರ್ಯಕರ್ತೆಯರು ಇಂಜೆಕ್ಷನ್ ಪಡೆಯುವಂತೆ ತಿಳಿಸಿದರೂ ಗಂಗಿಬಾಯಿ ನಿರ್ಲಕ್ಷ್ಯ ವಹಿಸಿದ್ದರು. ಈ ನಡುವೆ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಜ್ವರ ಹೆಚ್ಚಾಗಿ ಆರೋಗ್ಯ ಹದಗೆಟ್ಟಿದ್ದರಿಂದ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಗುಣವಾಗದೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗಂಗಿಬಾಯಿ ಸಾವನ್ನಪ್ಪಿದ್ದಾರೆ.
ಈ ಕುರಿತು ಶಿಕಾರಿಪುರ ತಾಲೂಕು ವೈದ್ಯಾಧಿಕಾರಿ ನವೀನ್ 'ಈಟಿವಿ ಭಾರತ್'ಗೆ ದೂರವಾಣಿಯಲ್ಲಿ ಮಾತನಾಡಿ, "ಮೃತರಿಗೆ ಬೆಕ್ಕು ಕಚ್ಚಿದಾಗ ಆಶಾ ಕಾರ್ಯಕರ್ತೆಯರು ಹೋಗಿ ಮೊದಲ ಇಂಜೆಕ್ಷನ್ ಪಡೆಯುವಂತೆ ಸೂಚಿಸಿದ್ದರು. ಅದರಂತೆ, ಅವರು ಮೊದಲ ಇಂಜೆಕ್ಷನ್ ಹಾಕಿಸಿಕೊಂಡಿದ್ದರು. ಆದರೆ ನಂತರದಲ್ಲಿ ಇಂಜೆಕ್ಷನ್ ಹಾಕಿಸಿಕೊಂಡಿರಲಿಲ್ಲ. ಇದು ಅವರ ಸಾವಿಗೆ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: "ಹುತ್ತಕೆ ಹಾಲೆರೆಯುವ ಬದಲು ಹಸಿದ ಮಕ್ಕಳಿಗೆ ನೀಡಿ": ವಿರಕ್ತ ಮಠದಲ್ಲಿ ವಿಭಿನ್ನವಾಗಿ ನಾಗರಪಂಚಮಿ ಆಚರಣೆ - Nagara Panchami celebration