ಹಾವೇರಿ:ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಸೋಲಿಗೆ ಬಿಜೆಪಿ ಮುಖಂಡರಾದ ಗುತ್ತಿಗೆದಾರ ಶ್ರೀಕಾಂತ ದುಂಡಿಗೌಡ್ರ ಮತ್ತು ಸಂಗಮೇಶ ಕಂಬಾಳಿಮಠ ಕಾರಣ ಎಂದು ಆರೋಪಿಸಿ ಈ ಇಬ್ಬರು ನಾಯಕರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಛಾಟಿಸಿದೆ. ಈ ಕ್ರಮಕ್ಕೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ ಕಂಬಾಳಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು, "ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಸೋಲಿಗೆ ಸಂಸದ ಬಸವರಾಜ ಬೊಮ್ಮಾಯಿ ಅವರ ಏಕಚಕ್ರಾಧಿಪತ್ಯವೇ ಕಾರಣ. ಉಪಚುನಾವಣೆಯಲ್ಲಿ ಮಾಡಿದ ಭಾಷಣ, ಜನರ ಮನಸ್ಥಿತಿ, ಮತ್ತು ವಕ್ಪ್ ಬೋರ್ಡ್ ಗಲಾಟೆಯ ಪ್ರಕರಣವೇ ಸೋಲಿಗೆ ಕಾರಣಗಳು. ಇದಲ್ಲದೇ ಬೊಮ್ಮಾಯಿ ಅವರು ಮೊದಲು ಬಿಜೆಪಿ ಟಿಕೆಟ್ ಅನ್ನು ಕಾರ್ಯಕರ್ತರಿಗೆ ಕೊಡಿಸುವುದಾಗಿ ಹೇಳಿದ್ದರು. ಬಳಿಕ ಪುತ್ರ ವ್ಯಾಮೋಹದಿಂದ ಟಿಕೆಟ್ ತೆಗೆದುಕೊಂಡು ಬಂದು ಸೋತರು. ಬಿಜೆಪಿ ಕೇವಲ ಒಬ್ಬರಿಗೆ ಸೀಮಿತವೇ? ಎನ್ನುವಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬೊಮ್ಮಾಯಿ ಕೊಡುಗೆಯೇನು ಅನ್ನೋದಕ್ಕೆ ಜನ ಇದೀಗ ಪಾಠ ಕಲಿಸಿದ್ದಾರೆ. ನಮ್ಮನ್ನು 6 ವರ್ಷ ಹೊರಗಿಟ್ಟರೆ ಮತ್ತೆ ಟಿಕೆಟ್ ಕೇಳಲ್ಲ ಎಂಬ ಕಾರಣದಿಂದ ಈ ಉಚ್ಛಾಟನೆ ಮಾಡಿದ್ದಾರೆ. ಈ ಕುರಿತಂತೆ ದೆಹಲಿ ಮತ್ತು ರಾಜ್ಯ ನಾಯಕರನ್ನು ನಿಯೋಗದ ಮೂಲಕ ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ" ಎಂದು ಹೇಳಿದರು.
ಈ ಬೆನ್ನಲ್ಲೇ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಭಾಸ ಚೌಹಾಣ್ ಅವರು ಪಕ್ಷದ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ ಸಂಗಮೇಶ್ ಕಂಬಾಳಿಮಠ ವಿರುದ್ಧ ಹರಿಹಾಯ್ದರು.