ಕರ್ನಾಟಕ

karnataka

ETV Bharat / state

ನಮ್ಮ ಕ್ಷೇತ್ರದ ಜನತೆ ದೇವರಿದ್ದಂತೆ- ದೇವೇಗೌಡರಿಗೆ ಡಿಕೆಶಿ ಟಾಂಗ್​; ಪುತ್ರನ ಪರ ಚೆನ್ನಮ್ಮ ಬೊಮ್ಮಾಯಿ ಮತಬೇಟೆ

ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್​ ಮತಬೇಟೆ ಮುಂದುವರಿದಿದೆ. ಗುರುವಾರ ಡಿಸಿಎಂ ಡಿಕೆ ಶಿವಕುಮಾರ್​ ಮತಯಾಚಿಸಿದರು. ಮತ್ತೊಂದೆಡೆ ಮಾಜಿ ಸಿಎಂ ಬೊಮ್ಮಾಯಿ ಪತ್ನಿ ಚೆನ್ನಮ್ಮ ಪುತ್ರನ ಪರ ಮತಬೇಟೆ ನಡೆಸಿದರು.

SHIGGAON BY ELECTION
ಶಿಗ್ಗಾಂವಿ ಉಪಚುನಾವಣೆ (ETV Bharat)

By ETV Bharat Karnataka Team

Published : Nov 7, 2024, 7:52 PM IST

Updated : Nov 7, 2024, 8:40 PM IST

ಹಾವೇರಿ:ಡಿಕೆಶಿ ಕನಕಪುರ ಲೂಟಿ ಮಾಡಿದ್ದಾರೆ ಎಂಬ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಶಿಗ್ಗಾಂವ್ ತಾಲೂಕಿನ ದುಂಡಸಿಯಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನಕಪುರ ಮತದಾರರು ಎಂಟು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಲೂಟಿ ಮಾಡಿದ್ದರೆ ಈ ರೀತಿ ಗೆಲ್ಲಿಸುತ್ತಿದ್ದರಾ ಎಂದು ಪ್ರಶ್ನಿಸಿದರು.

ದೇವೇಗೌಡರ ಸುಪುತ್ರ ಕುಮಾರಸ್ವಾಮಿ ವಿರುದ್ಧವೂ ನನ್ನನ್ನು ಗೆಲ್ಲಿಸಿದ್ದಾರೆ. ನಮ್ಮ ಕ್ಷೇತ್ರದ ಜನತೆ ದೇವರಿದ್ದಂತೆ ಎಂದು ಶಿವಕುಮಾರ್ ಅಭಿಪ್ರಾಯಪಟ್ಟರು. ದೇವೇಗೌಡರು ಮೊಮ್ಮಗನ ಚುನಾವಣೆಗಾಗಿ ಹೀಗೆ ಹೇಳುತ್ತಿದ್ದಾರೆ. ಇನ್ನೊಬ್ಬ ಮೊಮ್ಮಗನ ವಿಚಾರದಲ್ಲಿ ಗೌಡರಿಗೆ ಕಣ್ಣಲ್ಲಿ ನೀರು ಬರಲೇ ಇಲ್ಲ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್​ ಮತಬೇಟೆ (SHIGGAON BY ELECTION)

ಇನ್ನು, ಮಹಾಯತಿ ಮೈತ್ರಿ ಪಕ್ಷದವರು ಮಹಾ ಸುಳ್ಳುಗಾರರು ಎಂದು ಮಹಾರಾಷ್ಟ್ರ ಚುನಾವಣೆಯಲ್ಲಿನ ಎನ್​ಡಿಎ ಮೈತ್ರಿ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದರು. ಬಿಜೆಪಿ, ಶಿವಸೇನೆ ಮತ್ತು ಎನ್ ಸಿ ಪಿ(ಅಜಿತ್​ ಪವಾರ ಬಣ) ಮುಖಂಡರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುತ್ತೇನೆ. ಕರ್ನಾಟಕಕ್ಕೆ ಭೇಟಿ ಮಾಡಿ ನೋಡಲಿ ಬೇಕಿದ್ದರೆ ವಿಶೇಷ ಫ್ಲೈಟ್ ಮಾಡುತ್ತೇನೆ. ನಾವು ಗ್ಯಾರಂಟಿ ಜಾರಿಯಲ್ಲಿ ಪರ್ಫೆಕ್ಟ್ ಆಗಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು. ಕರ್ನಾಟಕದಲ್ಲಿ 1.20 ಕೋಟಿ ಕುಟುಂಬಗಳು ಗ್ಯಾರಂಟಿ ಯೋಜನೆಗಳ ಲಾಭ ಪಡಿಯುತ್ತಿವೆ. 52 ರಿಂದ 53 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಾಗಿ ಖರ್ಚು ಮಾಡ್ತಿದ್ದೇವೆ. ನಾವು ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ಸ್ವಾತಂತ್ರ್ಯ ಬಂದಾಗಿನಿಂದಲೂ ನುಡಿದಂತೆ ನಡೆದಿದ್ದೇವೆ ಎಂದರು.

ಜೆಪಿಸಿ ಅಧಿಕೃತ ಮಾಹಿತಿ ಕೊಟ್ಟಿಲ್ಲ: ಇನ್ನು, ರಾಜ್ಯಕ್ಕೆ ಜಂಟಿ ಸಂಸದೀಯ ಸಮಿತಿ ಬಂದಿಲ್ಲ, ಯಾರೋ ಒಬ್ಬರು ಬಂದಿದ್ದಾರೆ. ನಮಗೆ ಅಧಿಕೃತ ಮಾಹಿತಿಯನ್ನೂ ಕೊಟ್ಟಿಲ್ಲ, ಹಿಂದೆ ನೋಟಿಸ್ ಕೊಟ್ಟವರೇ ಬಿಜೆಪಿಯವರು ಈಗ ಸಮಿತಿ ಹೆಸರಲ್ಲಿ ಏನೇನೋ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದರು.

ಪುತ್ರನ ಪರ ಚೆನ್ನಮ್ಮ ಬೊಮ್ಮಾಯಿ ಪ್ರಚಾರ: ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿಯವರನ್ನು ಬೆಳೆಸಿದ ನೀವು ಭರತ್ ಬೊಮ್ಮಾಯಿ ಕೈಹಿಡಿದು ನಡೆಸಿರಿ ಎಂದು ಮತದಾರರಲ್ಲಿ ಚೆನ್ನಮ್ಮ ಬೊಮ್ಮಾಯಿ ಮನವಿ ಮಾಡಿದರು. ಶಿಗ್ಗಾಂವಿ ತಾಲೂಕಿನ ಹಳೇ ಮುತ್ತಳ್ಳಿಯಲ್ಲಿ ಪುತ್ರ ಭರತ್ ಪರ ಮಾತಯಾಚಿಸಿ ಅವರು ಮಾತನಾಡುತ್ತಿದ್ದರು. ಶಿಗ್ಗಾಂವ್ ಕ್ಷೇತ್ರದ ಜನತೆ ಬಸವರಾಜ ಬೊಮ್ಮಾಯಿ ಕೈಹಿಡಿದಿದ್ದರಿಂದ ಅವರು ಸಿಎಂ‌ ಆಗುವವರೆಗೂ ಸಾಧ್ಯವಾಯಿತು. ಅದರಂತೆ ಭರತ್ ಬೊಮ್ಮಾಯಿಗೂ ಬೆಂಬಲ ನೀಡಿ ಎಂದು ಮತಯಾಚಿಸಿದರು.

ಬಸವರಾಜ ಬೊಮ್ಮಾಯಿ 2008ರಿಂದ 2023ರ ವರೆಗೆ ಈ ಕ್ಷೇತ್ರದಲ್ಲಿ ಪಣತೊಟ್ಟು ಅಭಿವೃದ್ಧಿ ಮಾಡಿದ್ದಾರೆ. 2008ರ ಮೊದಲು ಈ ಕ್ಷೇತ್ರಕ್ಕೆ ಬಸವರಾಜ‌ ಬೊಮ್ಮಾಯಿ ಬಂದಾಗ ಯಾವುದೇ ಅಭಿವೃದ್ಧಿಯಿಲ್ಲದೇ ಶಿಗ್ಗಾವಿ-ಸವಣೂರು ಮತಕ್ಷೇತ್ರ ಸೊರಗಿಹೋಗಿತ್ತು. ಆದರೆ, ಕ್ಷೇತ್ರದ ಜನತೆಗಾಗಿ ತಮ್ಮನ್ನು ಕೈಹಿಡಿದ ಮತದಾರರಿಗಾಗಿ ರಸ್ತೆ, ಶಾಲೆ, ನೀರು, ಮನೆಗಳ ನಿರ್ಮಾಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಸವರಾಜ ಬೊಮ್ಮಾಯಿ ದುಡಿದಿದ್ದಾರೆ ಎಂದರು.

ಕ್ಷೇತ್ರದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ಬಂದು ಮಹಿಳೆಯರು ದುಡಿಯಲು ಆರಂಭಿಸಿದ್ದಕ್ಕೆ ಪುತ್ರನೇ ಕಾರಣನಾಗಿದ್ದಾನೆ. ಅವನು ನಿಮ್ಮ ಮನೆ ಮಗ. ಮಹಿಳೆಯರು ಸೇರಿದಂತೆ ಕ್ಷೇತ್ರದ ಎಲ್ಲಾ ಮತದಾರರು ಮುಂದುವರೆಯಬೇಕೆಂದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾನೆ. ಕ್ಷೇತ್ರದ ಏಳಿಗೆಗಾಗಿ ಮತದಾರರು ಭರತ್ ಬೆಂಬಿಲಿಸುವಂತೆ ಚೆನ್ನಮ್ಮ ಮನವಿ ಮಾಡಿದರು.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ: ಗೆಲ್ಲಿಸಲು ಮತದಾರರಲ್ಲಿ ಮನವಿ

Last Updated : Nov 7, 2024, 8:40 PM IST

ABOUT THE AUTHOR

...view details