ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅಗ್ರಗಣ್ಯ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ. ದ್ವೈವಾರ್ಷಿಕವಾಗಿ ನಡೆಯುವ 15 ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇತ್ತೀಚಿನ ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನವು ಅನಾವರಣಗೊಳ್ಳಲಿದೆ.
ಸಿಎಟಿಎಸ್ ವಾರಿಯರ್ ಅನಾವರಣ: ಕಾಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಮ್ (ಸಿಎಟಿಎಸ್ ಅಥವಾ ಕ್ಯಾಟ್ಸ್) ವಾರಿಯರ್ ಇದು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇದು ಪೂರ್ಣ ಪ್ರಮಾಣದ ಎಂಜಿನಿಯರಿಂಗ್ ವ್ಯವಸ್ಥೆಯಾಗಿದ್ದು, ಇಂಡಿಯಾ ಪೆವಿಲಿಯನ್ನಲ್ಲಿ ಪ್ರದರ್ಶಿತವಾಗಲಿದೆ. ಕ್ಯಾಟ್ಸ್ ವಾರಿಯರ್ ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
ಲೈಟ್ ಯುಟಿಲಿಟಿ ಹೆಲಿಕಾಪ್ಟರ್: ಏರೋ ಇಂಡಿಯಾ 2025 ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ದೇಶೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇಂಡಿಯಾ ಪೆವಿಲಿಯನ್ನಲ್ಲಿ ಪ್ರದರ್ಶಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿರುವ ಎಚ್ಎಎಲ್ ತಿಳಿಸಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ ಆರಂಭವಾಗಲಿರುವ ಐದು ದಿನಗಳ ಈ ಕಾರ್ಯಕ್ರಮದಲ್ಲಿ ಎಚ್ ಎಎಲ್ ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್ ಯುಎಚ್) ಮತ್ತು ಕ್ಯಾಟ್ಸ್ ವಾರಿಯರ್ ಪ್ರಮುಖ ಆಕರ್ಷಣೆಗಳಾಗಿವೆ.
HAL’s LUH to take Centre Stage, CATS Warrior Star of India Pavilion @AeroIndiashow. HAL will showcase its indigenous products and technologies centred on the theme ‘Innovate. Collaborate. Lead’ at Aero India 2025 beginning February 10 at Airforce Station Yelahanka. pic.twitter.com/2A6xTXZ9DM
— HAL (@HALHQBLR) February 7, 2025
"ಎಚ್ಎಎಲ್ನ ಎಲ್ಯುಎಚ್ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ. ಕ್ಯಾಟ್ಸ್ ವಾರಿಯರ್ ಇದು ಏರೋ ಇಂಡಿಯಾ ಪವಿಲಿಯನ್ನ ಸ್ಟಾರ್ ಆಫ್ ಇಂಡಿಯಾ ಆಗಲಿದೆ. ಎಚ್ಎಎಲ್ ತನ್ನ ದೇಶೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಆವಿಷ್ಕಾರ, ಸಹಕಾರ ಮತ್ತು ನಾಯಕತ್ವ ಎಂಬ ಮೂರು ಅಂಶಗಳ ಆಧಾರದಲ್ಲಿ ಪ್ರದರ್ಶಿಸಲಿದೆ." ಎಂದು ಎಚ್ಎಎಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇಂಡಿಯಾ ಪೆವಿಲಿಯನ್ ಎಚ್ಎಎಲ್ನ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಿದ್ದು, ವಿಮಾನ ಮತ್ತು ಹೆಲಿಕಾಪ್ಟರ್ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ತನ್ನ ಸಾಮರ್ಥ್ಯಗಳನ್ನು ಅನಾವರಣಗೊಳಿಸಲಿದೆ. ಎಚ್ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹೆಲಿಕಾಪ್ಟರ್ ಎಲ್ಯುಎಚ್ ಪ್ರದರ್ಶನದ ಸ್ಟಾರ್ ಆಕರ್ಷಣೆಗಳಲ್ಲಿ ಒಂದಾಗಿದೆ. ಮಾನವರಹಿತ ವೈಮಾನಿಕ ವಾಹನಗಳ ಕ್ಷೇತ್ರದಲ್ಲಿ ಎಚ್ಎಎಲ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಭವಿಷ್ಯದ ಮಾನವರಹಿತ ಯುದ್ಧ ವಾಯು ವಾಹನವಾದ ಕ್ಯಾಟ್ಸ್ ವಾರಿಯರ್ ಅನ್ನು ಸಹ ಪ್ರದರ್ಶಿಸಲಾಗುವುದು.
ದೇಶ-ವಿದೇಶಗಳಿಂದ ಪ್ರವಾಸಿಗರ ಆಗಮನ: ವಿಶ್ವದಾದ್ಯಂತದ ವಿವಿಧ ದೇಶಗಳ ರಕ್ಷಣಾ ಸಚಿವರು, ಗಣ್ಯರು ಮತ್ತು ಉದ್ಯಮದ ಮುಖಂಡರು ಸೇರಿದಂತೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಏರೋ ಇಂಡಿಯಾಗೆ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮವು ಎಚ್ಎಎಲ್ಗೆ ತನ್ನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಜೊತೆಗೆ ಜಾಗತಿಕ ಏರೋಸ್ಪೇಸ್ ಕಂಪನಿಗಳೊಂದಿಗೆ ಸಹಯೋಗ ಮತ್ತು ಸಹಭಾಗಿತ್ವದ ಅವಕಾಶಗಳನ್ನು ಅನ್ವೇಷಿಸುತ್ತದೆ.
ಏಷ್ಯಾದ ಅತಿದೊಡ್ಡ ವೈಮಾನಿಕ ಶೋ: ರಕ್ಷಣಾ ಸಚಿವಾಲಯವು ಎಚ್ಎಎಲ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಬಾಹ್ಯಾಕಾಶ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸುತ್ತಿರುವ ಏರೋ ಇಂಡಿಯಾ 1996 ರಲ್ಲಿ ಪ್ರಾರಂಭವಾದಾಗಿನಿಂದ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. ಪ್ರವಾಸಿಗರು ವಿಶ್ವದ ಕೆಲ ಅತ್ಯಾಧುನಿಕ ಫೈಟರ್ ಜೆಟ್ ಗಳು, ಹೆಲಿಕಾಪ್ಟರ್ ಗಳು ಮತ್ತು ಡ್ರೋನ್ ಗಳನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ : ಏರೋ ಇಂಡಿಯಾ: ರೋಮಾಂಚಕ ಪ್ರದರ್ಶನಕ್ಕೆ ಸೂರ್ಯಕಿರಣ್ ಏರೋಬ್ಯಾಟಿಕ್ ಟೀಂ ಸಜ್ಜು - AERO INDIA 2025