ಶಿವಮೊಗ್ಗ: ಶರಾವತಿ ಹಿನ್ನೀರಿನ ಅಧಿದೇವತೆ ಸಿಗಂದೂರಿನ ಚೌಡೇಶ್ವರಿ ದೇವಿಯ ಜಾತ್ರೆಯು ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಗಿದೆ. ಮಕರ ಸಂಕ್ರಾಂತಿಯಿಂದ ಎರಡು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಾಡಿನಾದ್ಯಂತದಿಂದ ಭಕ್ತರು ಆಗಮಿಸುತ್ತಾರೆ. ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು.
ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ಚೌಡೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅರ್ಚನೆ ನಡೆಸಲಾಯಿತು. ನಂತರ ದೇವಿಯ ಮೂಲ ಸ್ಥಾನವಾದ ಸಿಗೇ ಕಣಿವೆಯಲ್ಲಿ ನವ ಚಂಡಿಕಾ ಹೋಮ ನೆರವೇರಿತು. ಹೋಮ ಹವನ ಪೂರ್ವಾಹುತಿಯಲ್ಲಿ ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು. ಸಿಗೇ ಕಣಿವೆಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಚೌಡೇಶ್ವರಿ ದೇವಿಗೆ ಉಘೇ ಉಘೇ ಎಂದು ಈಗಿನ ಸಿಗಂದೂರು ಗ್ರಾಮದತ್ತ ಹೆಜ್ಜೆ ಹಾಕಿದರು. ಸಿಗೇ ಕಣಿವೆಯ ಮೂಲ ಸ್ಥಾನದಲ್ಲಿ ದೇವಿಯ ಉದ್ಭವ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಿಗೇ ಕಣಿವೆಯಿಂದ ಅಖಂಡ ಜ್ಯೋತಿ ಮೆರವಣಿಗೆ:ಸಿಗೇ ಕಣಿವೆಯಿಂದ ದೇವಾಲಯದ ತನಕ ಪ್ರತಿ ವರ್ಷ ಜರುಗುವ ಅಖಂಡ ಜ್ಯೋತಿ ಮೆರವಣಿಗೆಗೆ ಸಿಗಂದೂರು ದೇವಾಲಯದ ಧರ್ಮಾಧಿಕಾರಿ ಡಾ.ಎಸ್. ಧರ್ಮಪ್ಪನವರ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಜಿ. ಚಾಲನೆ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಅಥಿತಿಗಳಾಗಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ಪಿ ಪಿ.ವೀರೇಂದ್ರ ಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡೀಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ಈಡೀಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕೆಡಿಪಿ ಸದಸ್ಯ ಸತ್ಯನಾರಾಯಣ ಸತ್ಯನಾರಾಯಣ ಜಿ.ಟಿ., ತಾಲೂಕು ಪಶು ವೈದ್ಯಕೀಯ ನಾಮ ನಿರ್ದೇಶಕ ಸದಸ್ಯ ಗಣೇಶ ಜಾಕಿ, ಶ್ರೀದೇವಿ ರಾಮಚಂದ್ರ, ಜಿಲ್ಲಾ ಮಟ್ಟದ ವಿವಿಧ ಸದಸ್ಯರು, ಕರೂರು ಹೋಬಳಿಯ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಗಣ್ಯರು ಉಪಸ್ಥಿತರಿದ್ದರು.
ಸಿಗಂದೂರಿಗೆ ಹರಿದು ಬಂದ ಭಕ್ತ ಸಾಗರ:ಸಿಗಂದೂರು ಜಾತ್ರಾ ಮಹೋತ್ಸವದ ಮೂದಲ ದಿನವಾದ ಇಂದು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು, ಅಕ್ಕಿ, ಬೆಲ್ಲ, ವಿವಿಧ ಸೇವೆ ನೀಡಿ ಹರಕೆ ಪೂಜೆ ಸಲ್ಲಿಸಿ, ಮುಡಿಗಂಧ ಪ್ರಸಾದ ಸ್ವೀಕರಿಸಿದರು.
ಅನ್ನ ದಾಸೋಹದಲ್ಲಿ ತುಂಬಿ ತುಳಿಕಿದ ಭಕ್ತರು:ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳು ಸಂಖ್ಯೆ ಹೆಚ್ಚಳ ಹಿನ್ನೆಲೆ ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ದೇವಸ್ಥಾನ ಸಮಿತಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಿದೆ.