ಹಾಸನ: ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಇಂದು 'ಹಾಸನ ಚಲೋ' ಹೋರಾಟ ನಡೆಸಿವೆ. ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡು ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕೆಂದು ಸಂಘಟನೆಗಳು ಆಗ್ರಹಿಸಿದವು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳ ಸಂಯುಕ್ತ ಆಶಯದಲ್ಲಿ 'ಹೋರಾಟದ ನಡುಗೆ ಹಾಸನದ ಕಡೆಗೆ' ಎಂಬ ಹೆಸರಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ ಹಲವು ಸಂಘಟನೆಗಳು ಈ ಹೋರಾಟಕ್ಕೆ ಸಾಥ್ ನೀಡಿದ್ದು, ಸಾವಿರಾರು ಪ್ರತಿಭಟನಾಕಾರರು ಹಾಸನಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ನಗರದ ಹೇಮಾವತಿ ಪ್ರತಿಮೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಇಲ್ಲಿಂದ ಹೊರಟ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಹೊಸ ಬಸ್ ನಿಲ್ದಾಣದ ರಸ್ತೆಯವರೆಗೆ ಸಾಗಿತು. 'ನಾವೆದ್ದು ನಿಲ್ಲದಿದ್ದರೇ' ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದಕ್ಕೆ ಮಾರ್ಗದುದ್ದಕ್ಕೂ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಯಿತು.