ಕರ್ನಾಟಕ

karnataka

ETV Bharat / state

ಇನ್ಮುಂದೆ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಮರಳು; ಸಚಿವರಿಂದ ಮಹತ್ವದ ಮಾಹಿತಿ

ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದ್ದು, ಪ್ರತಿ ಮೆಟ್ರಿಕ್​ ಟನ್‌ ಮರಳಿನ ಮಾರಾಟ ಬೆಲೆಯನ್ನು 300 ರೂ.ಗೆ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

SAND RATE IN KARNATAKA
ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌ (ETV Bharat)

By ETV Bharat Karnataka Team

Published : Dec 3, 2024, 4:21 PM IST

ಬೆಂಗಳೂರು:ರಾಜ್ಯ ಸರ್ಕಾರವು ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದೆ. ಆಯವ್ಯಯದಲ್ಲಿ ಘೋಷಿಸಿರುವಂತೆ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ಮರಳು ನೀತಿಯಂತೆ ಈಗಾಗಲೇ ಸಾರ್ವಜನಿಕ ಹಾಗೂ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು 1, 2 ಮತ್ತು 3ನೇ ಶ್ರೇಣಿಯ ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು. ಪ್ರತಿ ಮೆಟ್ರಿಕ್​ ಟನ್‌ ಮರಳಿನ ಮಾರಾಟ ಬೆಲೆಯನ್ನು 300 ರೂ.ಗೆ ನಿಗದಿಪಡಿಸಲಾಗಿದೆ ಮತ್ತು ಸದರಿ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

4, 5 ಮತ್ತು ಉನ್ನತ ಶ್ರೇಣಿಗಳ ಹಳ್ಳ/ನದಿಗಳ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್​ಗಳನ್ನು ಸರ್ಕಾರದಿಂದ ಅಧಿಸೂಚಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಸರ್ಕಾರಿ ಇಲಾಖೆಗಳಿಗೆ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೇ ರೀತಿ ಸಾರ್ವಜನಿಕ/ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಮರಳು ಬ್ಲಾಕ್‌ಗಳನ್ನು ವಿಲೇವಾರಿ ಮಾಡುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ ಮಾಹಿತಿ ನೀಡಿದ್ದಾರೆ.

ಈ ನೂತನ ನೀತಿಯಂತೆ ಮರಳು ಬ್ಲಾಕ್‌ಗಳ ಟೆಂಡರ್‌ ಅನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್‌ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್‌ ಪದ್ಧತಿಯಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ ಪ್ರತಿ ಮೆಟ್ರಿಕ್​ ಟನ್‌ ಮರಳು ಏಕರೂಪ ಮಾರಾಟ ದರ 850 ರೂ. ಯನ್ನು ನಿಗದಿಪಡಿಸಲಾಗಿದೆ. ಸರ್ಕಾರವು ನಿಗದಿಪಡಿಸುವ ಮಾರಾಟ ಬೆಲೆಯ ಮೊತ್ತದ ಶೇ.50ರಷ್ಟನ್ನು Ceiling price ಎಂದು ಹಾಗೂ Ceiling Priceನ ಶೇ.60ರಷ್ಟನ್ನು Cut-off Price ಎಂದು ನಿಗದಿಪಡಿಸಲಾಗಿರುತ್ತದೆ. Ceiling Price ಮತ್ತು Cut-off Priceಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್‌ ಮೊತ್ತವನ್ನು ನಮೂದಿಸಿದವರನ್ನು ಯಶಸ್ವಿ ಬಿಡ್ಡುದಾರರೆಂದು ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚು ಟೆಂಡರ್‌ದಾರರು ಏಕರೂಪ ಟೆಂಡರ್‌ ದರವನ್ನು ನಮೂದಿಸಿದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್ಡುದಾರರನ್ನು ಆಯ್ಕೆ ಮಾಡಲಾಗುವುದು. ಟೆಂಡರ್‌ ಪ್ರಕ್ರಿಯೆಯನ್ನು e-Portalನಲ್ಲಿ ನಡೆಸಲಾಗುತ್ತಿದ್ದು, ಸದರಿ Portal ಮೂಲಕ ಆಸಕ್ತ ವ್ಯಕ್ತಿ/ಖಾಸಗಿ ಕಂಪನಿ/ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು ಎಂದು ಸಚಿವರು ವಿವರಿಸಿದ್ದಾರೆ.

ಈ ಸಂಬಂಧ ಸರ್ಕಾರದಿಂದ ಮಾರ್ಗಸೂಚಿ ಮತ್ತು ಟೆಂಡರ್‌ ಡಾಕ್ಯುಮೆಂಟ್‌ ಅನ್ನು ಎಲ್ಲಾ ಜಿಲ್ಲಾ ಕಚೇರಿಗಳಿಗೆ ನೀಡಲಾಗಿದ್ದು, ಸರ್ಕಾರದಿಂದ ಜಾರಿ ಮಾಡಿರುವ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ನಿರ್ದೇಶಿಸಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಮತ್ತೆ ಮರಳುಗಾರಿಕೆ ಬಂದ್​​: ಮನೆ, ಕಟ್ಟಡ ನಿರ್ಮಾಣಕ್ಕೆ ಸಂಕಷ್ಟ

ABOUT THE AUTHOR

...view details