ಬೆಂಗಳೂರು : ಉದ್ಯೋಗಿಗಳ ಇಪಿಎಫ್ ಹಣ ವಂಚಿಸಿದ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಹಾಗೂ ಆರೋಪ ಎದುರಿಸುತ್ತಿರುವ ಕಂಪನಿಯಲ್ಲಿ ತಮ್ಮ ಸ್ಥಾನಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿರುವುದಾಗಿ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ. ಇಪಿಎಫ್ ಹಣ ಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ವಾರೆಂಟ್ ಜಾರಿಯಾದ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ.
"2018 -19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಅದೇ ಕಾರಣದಿಂದ ಆ ಕಂಪನಿಗಳು ನನ್ನನ್ನ ನಿರ್ದೇಶಕನಾಗಿ ನೇಮಕಗೊಳಿಸಿದ್ದವು. ಅದಾಗ್ಯೂ ನಾನು ಆ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರವನ್ನು ಹೊಂದಿರಲಿಲ್ಲ. ಹಾಗೂ ಆ ಕಂಪನಿಗಳ ದೈನಂದಿನ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ. ವೃತ್ತಿಪರ ಕ್ರಿಕೆಟಿಗನಾಗಿ, ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ನನಗೆ ಆ ಕಂಪನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲಿಲ್ಲ ಹಾಗೂ ಅಷ್ಟು ಪರಿಣತಿಯೂ ಇರಲಿಲ್ಲ. ವಾಸ್ತವವಾಗಿ ನಾನು ಇದುವರೆಗೂ ಹಣ ಹೂಡಿಕೆ ಮಾಡಿರುವ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿರುವುದಿಲ್ಲ" ಎಂದಿದ್ದಾರೆ.