ಬೆಂಗಳೂರು: ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ನೋಡಿದರೆ ಒಂದು ಕ್ಷಣ ದಂಗಾಗುವುದು ಸಾಮಾನ್ಯ. ಇದೇ ರೀತಿ ನಗರದ ಪ್ರಸಿದ್ಧ ವಿಠಲ್ ಮಲ್ಯ ರಸ್ತೆಯಲ್ಲಿ ಹೋಗುತ್ತಿದ್ದ ಮೆಕಲಾರೆನ್ಸ್-720 ಕಾರು ಕಂಡು ಬೈಕ್ ಸವಾರರಿಬ್ಬರು ವಾಹನ ಚಲಾಯಿಸುತ್ತಲೇ ವಿಡಿಯೋ ಮಾಡಿಕೊಳ್ಳಲು ಹೋಗಿ ಕೆಳಕ್ಕೆ ಬಿದ್ದಿದ್ದಾರೆ.
ಕಾರು ಕಂಡು ಹಿಂಬಾಲಿಸಿದ ಸವಾರರು ಚಲಿಸುತ್ತಿದ್ದ ಕಾರಿನ ಹತ್ತಿರ ಹೋಗಿ ಮೊಬೈಲ್ನಲ್ಲಿ ವಿಡಿಯೋ ಮಾಡುವಾಗ ನಿಯಂತ್ರಣ ಕಳೆದುಕೊಂಡು ಕಾರಿನ ಎಡಭಾಗಕ್ಕೆ ಬೈಕ್ ಗುದ್ದಿ ಕೆಳ ಬಿದ್ದಿದ್ದಾರೆ. ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಕಾರು ಹೋಗುತ್ತಿರುವುದನ್ನು ನೋಡಿದ ಬೈಕ್ ಸವಾರರು ಅದನ್ನು ಫಾಲೋ ಮಾಡಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಹಿಂಬದಿ ಬೈಕ್ ಸವಾರನೋರ್ವ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಬೈಕ್ ಸವಾರ ಇನ್ನಷ್ಟು ಹತ್ತಿರ ಹೋದಾಗ ಏಕಾಏಕಿ ಕಾರು ಎಡಬದಿಗೆ ಬಂದಿದ್ದರಿಂದ ಬೈಕ್ ತಗುಲಿ ಬಿದ್ದಿದ್ದಾರೆ.