ಬೆಳಗಾವಿ: ಜೀವನ ನಿರ್ವಹಣೆ ಕಷ್ಟ ಎನಿಸಿದಾಗ ಎಲ್ಲರಿಗೂ ನೆನಪಾಗುವುದೇ ಅತ್ಮಹತ್ಯೆಯ ದಾರಿ. ಹೀಗೆ ತಮ್ಮ ಜೀವನಕ್ಕೆ ಅಂತ್ಯವಾಡುವ ಹಲವಾರು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಆದರೆ, ಸಾವಿನ ದವಡೆಯಲ್ಲಿ ಇದ್ದವರನ್ನು ಬದುಕಿಸುವ ಸಣ್ಣ ಪ್ರಯತ್ನವೂ ಆಗದಿರುವುದು ದುರದೃಷ್ಟಕರ. ಆದರೆ, ಇಲ್ಲೋರ್ವ ಶಾಲಾ ಬಾಲಕಿ, ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಬದುಕಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ.
ಮೊಬೈಲ್ ಗೀಳು ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಯಾರಾದರೂ ಸಂಕಷ್ಟದಲ್ಲಿದ್ದರೆ ಅದನ್ನು ತಡೆಯಲು ಮುಂದಾಗದೇ ವಿಡಿಯೋ ಮಾಡುವ ಧಾವಂತವೇ ಹೆಚ್ಚು. ಆದರೆ, ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ವಿಶ್ವನಾಥ್ ಸವ್ವಾಶೇರಿ ಅವರು, ಚಲಿಸುವ ರೈಲಿಗೆ ಹೆತ್ತ ಕುಡಿಗಳೊಂದಿಗೆ ತಲೆ ಕೊಡಲು ಮುಂದಾಗಿದ್ದ ಗೃಹಿಣಿಯೋರ್ವರನ್ನು ತನ್ನ ಸಮಯಪ್ರಜ್ಞೆ ಮೂಲಕ ರಕ್ಷಿಸಿದ್ದಳು.
ಹೌದು, ಕಳೆದ ಆಗಸ್ಟ್ 22ರಂದು ರಾತ್ರಿ 8.30ರ ಸಮಯದಲ್ಲಿ ಸ್ಫೂರ್ತಿ ತನ್ನ ತಂದೆ-ತಾಯಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾಂಗ್ರೆಸ್ ರಸ್ತೆಯ ರೈಲ್ವೆ ಫಸ್ಟ್ ಗೇಟ್ ಬಳಿ ಓರ್ವ ಅಪರಿಚಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡಿತ್ತು. ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆಂದು ಅನುಮಾನಗೊಂಡ ಸ್ಫೂರ್ತಿ, ತಕ್ಷಣವೇ ಕಾರಿನಿಂದ ಇಳಿದು ಓಡೋಡಿ ಅವರ ಬಳಿ ಹೋಗಿದ್ದಳು. ಅಲ್ಲದೇ ಅಲ್ಲಿಯೇ ಹೋಗುತ್ತಿದ್ದ ಜನರನ್ನು ಕೂಗಿ ಕರೆದು, ಅವರ ಸಹಾಯದಿಂದ ಮೂವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ಬಾಲಕಿ ಯಶಸ್ವಿಯಾಗಿದ್ದಳು. ಆ ಬಳಿಕ ಸಂಬಂಧಿಕರ ಮೂಲಕ ಅವರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದ ನಂತರವೇ ಸ್ಫೂರ್ತಿ ನಿಟ್ಟುಸಿರು ಬಿಟ್ಟಿದ್ದಳು. ಈ ರೀತಿ ಸ್ಫೂರ್ತಿಯ ಮಾನವೀಯತೆ ಆ ಬಡ ಜೀವಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಫೂರ್ತಿ, "ಆ ಮಹಿಳೆ ಮತ್ತು ಮಕ್ಕಳನ್ನು ನೋಡಿ ಸುಮ್ಮನೆ ಆಗಿದ್ದರೆ, ನನ್ನ ಜೀವ ಇರೋವರೆಗೂ ನಾನು ಕೊರಗಬೇಕಿತ್ತು. ಹಾಗಾಗಿ, ನನ್ನ ಈ ಸಣ್ಣ ಕಾರ್ಯ ಆ ಮೂವರನ್ನು ಬದುಕಿಸಿದೆ. ನನಗೆ ನಿಜಕ್ಕೂ ತುಂಬಾ ಸಂತೋಷ ಮತ್ತು ಸಂತೃಪ್ತಿ ಆಗುತ್ತಿದೆ. ನನ್ನ ತಂದೆ-ತಾಯಿ, ನಿರಾಶ್ರಿತರು-ನಿರ್ಗತಿಕರ ಒಳಿತಿಗೆ ಕೆಲಸ ಮಾಡುತ್ತಾರೆ. ಇಂಥ ಕಾರ್ಯಕ್ಕೆ ಅವರೇ ನನಗೆ ಪ್ರೇರೇಪಣೆ. ಇದರ ಸಂಪೂರ್ಣ ಶ್ರೇಯಸ್ಸು ತಂದೆ-ತಾಯಿಗೆ ಸಲ್ಲುತ್ತದೆ" ಎಂದು ಹೇಳಿದಳು.